ಸೋಮವಾರಪೇಟೆ, ಮೇ 21: ಪರಿಶುದ್ಧ ಮನಸ್ಸಿನೊಂದಿಗೆ ನಿಸ್ವಾರ್ಥ ಕಾಯಕ ಮಾಡಿದರೆ ಮಾತ್ರ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೋರ್ವ ರೂ ಪರಿಶುದ್ಧತೆಯನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಬೆಂಗಳೂರು ಸರ್ಪ ಭೂಷಣ ಮಠದ ಮಠಾಧೀಶ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ಇಲ್ಲಿನ ವಿರಕ್ತ ಮಠದ ಆಶ್ರಯದಲ್ಲಿ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರುಸಿದ್ದ ಮಹಾ ಸ್ವಾಮಿಗಳ 30ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ವಟುಗಳಿಗೆ ಶಿವದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾನವನ ಆಸೆಗಳಿಂದ ಜೀವನದ ನೆಮ್ಮದಿ, ಸುಖ ಕರಗುತ್ತಿದೆ. ಭೋಗದ ಜೀವನದಿಂದ ಸಾಧನೆ ಶೂನ್ಯ ವಾಗಲಿದೆ. ಪರಿಶುದ್ಧ ಮನಸ್ಸು, ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದರು. ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರು ಆಧುನಿಕ ಸಂವಿಧಾನದ ಪಿತಾಮಹರಾಗಿದ್ದರು. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದ್ದರು ಎಂದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಕ್ತಮಠದ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ ವಹಿಸಿದ್ದರು. ವಿವಿಧ ಮಠದ ಮಠಾಧೀಶರುಗಳಾದ ಸಿದ್ದಲಿಂಗ ಮಹಾಸ್ವಾಮಿ, ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜದ ಯಜಮಾನರಾದ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಎನ್. ಮಹೇಶ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶಾಂತಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅರ್ಚಕರಾದ ಮೋಹನ ಮೂರ್ತಿ ಶಾಸ್ತ್ರಿ ಮತ್ತು ಬಸವ ಕುಮಾರ್ ಶಾಸ್ತ್ರಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಮತ್ತು ವೀರಶೈವ ವಟುಗಳಿಗೆ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವದೀಕ್ಷಾ ಸಂಸ್ಕಾರಗಳು ನಡೆಯಿತು.

ಅರಸೀಕೆರೆ ತಾಲೂಕು ಹೊಸಳ್ಳಿ ಮತ್ತು ನಾಗತಿಹಳ್ಳಿ ಗ್ರಾಮದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ 2016ರ ಡಿಸೆಂಬರ್ ತಿಂಗಳಲ್ಲಿ ಶ್ರೀ ಮಠದಲ್ಲಿ ಜರುಗಿದ ಶಿವಾನುಭವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವೀರಶೈವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಮಾಜದ ಪ್ರಮುಖರಾದ ಜೆ.ಸಿ. ಶೇಖರ್, ಎಸ್.ಸಿ. ಚಿರಂತ್, ಬಿ.ಪಿ. ಶಿವಕುಮಾರ್, ಮೃತ್ಯುಂಜಯ ಸೇರಿದಂತೆ ಸಮಾಜದ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.