ವೀರಾಜಪೇಟೆ, ಮೇ 22: ಕಳೆದ ಮೂರು ವರ್ಷಗಳ ಅವಧಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸರಹದ್ದನ್ನು ಗುರುತಿಸಿ ನಕಾಶೆ ತಯಾರಿಸಿದರೂ ಪಟ್ಟಣ ಪಂಚಾಯಿತಿಗೆ ಸೇರಿದ ಕೆಲವು ಪ್ರದೇಶಗಳು ಇನ್ನು ಗ್ರಾಮ ಪಂಚಾಯಿತಿಯಲ್ಲಿ ಉಳಿದುಕೊಂಡು ಪಟ್ಟಣ ಪಂಚಾಯಿತಿಯ ಆದಾಯ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಗೆ ಕಾನೂನು ಬದ್ಧವಾಗಿ ಸೇರಬೇಕಾದ ಎಲ್ಲ ಪ್ರದೇಶಗಳನ್ನು ಸೇರಿಸಿ ಸಮೀಕ್ಷೆ ನಡೆಸಿ ನಕಾಶೆಯನ್ನು ಪುನರ್ ರಚಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿ ಹಾಗೂ ಸರಕಾರದ ಸಂಬಂಧಿಸಿದ ಇಲಾಖೆಗೆ ಸಲ್ಲಿಸುವಂತೆ ಪಂಚಾಯಿತಿ ಆಡಳಿತ ತೀರ್ಮಾನಿಸಿದೆ.ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಇ.ಸಿ.ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಪಟ್ಟಣದ ಗಡಿರೇಖೆ ಕುರಿತು ಸದಸ್ಯರುಗಳ ನಡುವೆ ದೀರ್ಘ ಚರ್ಚೆ ನಡೆಯಿತು. ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಮನೆಗಳು, ಜಾಗಗಳಿದ್ದರೂ ಎಲ್ಲ ಬಿಟ್ಟಂಗಾಲ, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಸೇರಿದ್ದು, ಸವಲತ್ತು ಸೌಲಭ್ಯಗಳು ಪಂಚಾಯಿತಿಯಿಂದ ನೀಡಲಾಗುತ್ತಿದೆ. ಇದರಿಂದ ಪಟ್ಟಣ ಪಂಚಾಯಿತಿಗೆ ತೊಂದರೆ ಉಂಟಾಗಿದೆ. ನಿವಾಸಿಗಳು ಪಟ್ಟಣದ ಗಡಿರೇಖೆಯ ಒಳಗಿದ್ದರೂ ಮನೆ ಕಂದಾಯ,

(ಮೊದಲ ಪುಟದಿಂದ) ಕಟ್ಟಡದ ಪರವಾನಗಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಪಡೆದು ನೀರು, ಚರಂಡಿ, ರಸ್ತೆ ಸೌಲಭ್ಯಕ್ಕೆ ಪಟ್ಟಣ ಪಂಚಾಯಿತಿಯನ್ನು ಅವಲಂಭಿತರಾಗಿದ್ದಾರೆ. ಗಡಿ ರೇಖೆಯನ್ನು ವೈಜ್ಞಾನಿಕವಾಗಿ ಗುರುತಿಸಿ ಹೊಸ ನಕಾಶೆ ತಯಾರಿಸಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಜೊತೆಗೆ ಪಟ್ಟಣದಲ್ಲಿರುವ ಗ್ರೀನ್‍ಬೆಲ್ಟ್ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಹಿರಿಯ ಸದಸ್ಯ ಎಸ್.ಎಚ್.ಮೈನುದ್ದೀನ್, ಕೆ.ಎನ್ ವಿಶ್ವನಾಥ್ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಸಭೆಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ನಗರ ಮತ್ತು ಗ್ರಾಮಾಂತರ ಯೋಜನೆ ಅಧಿಕಾರಿ ಅಶೋಕ್ ಪ್ರತಿಕ್ರಿಯಿಸಿ ಈ ಹಿಂದಿನ ನಕಾಶೆಯಲ್ಲಿ ಸರ್ವೆ ನಂಬರ್ ಅದಲು ಬದಲಾಗಿದ್ದರಿಂದ ನಕಾಶೆಯಲ್ಲಿ ಎಲ್ಲ ಗಡಿ ರೇಖೆಗಳು ಸೇರಿಸಲು ಸಾಧ್ಯವಾಗಿಲ್ಲ. ಸದಸ್ಯರುಗಳು ಸೇರಿ ಅಧಿಕಾರಿಗಳೊಂದಿಗೆ ಗಡಿ ರೇಖೆ ಗುರುತಿಸಿ ಹೊಸ ನಕಾಶೆ ತಯಾರಿಸಿದರೆ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗುವದು ಎಂದರು.

ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಮಾತನಾಡಿ ಇಂದಿನ ಗಡಿರೇಖೆ ಪ್ರಕಾರ ವೀರಾಜಪೇಟೆಯ ವಿಸ್ತೀರ್ಣ 12 ಚದರ ಕಿ.ಮೀ. ಆದರೆ ಪ್ರಸ್ತುತ ದಾಖಲೆಯ ಪ್ರಕಾರ8.6 ಚದರ ಕಿ.ಮೀ ಇದೆ. ಇದನ್ನು ಯೋಜನಾ ಪ್ರಾಧಿಕಾರದವರು ಪುನಃ ಸಮೀಕ್ಷೆ ನಡೆಸಿ ಸರಿಪಡಿಸಬೇಕಾಗಿದೆ ಎಂದು ಸಭೆಗೆ ತಿಳಿಸಿದರು. ಪಟ್ಟಣದಲ್ಲಿ ಕುಡಿಯುವ ನೀರಿನ ಪೊರೈಕೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಸದಸ್ಯ ಪಟ್ಟಡ ರಂಜಿ, ಎಸ್.ಎಚ್.ಮತೀನ್, ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಸಭೆಗೆ ಆಗ್ರಹಿಸಿದರು.

ಪಟ್ಟಡ ರಂಜಿ ಮಾತನಾಡಿ ಡೀಸೆಲ್ ಬಿಲ್ ಅಧಿಕವಾಗಿ ಬರುತ್ತಿದ್ದರೂ ಪಟ್ಟಣದ ಜನತೆಗೆ ಸರಿಯಾಗಿ ಕುಡಿಯುವ ನೀರು ದೊರೆಯುತ್ತಿಲ್ಲ. ನೀರು ಪೊರೈಕೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

ಮಡಿಕೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರವು ಕಳುಹಿಸಿರುವ ಭೂ ಪರಿವರ್ತನೆಯಾದ ಜಮೀನುಗಳನ್ನು ಮಾತ್ರ ಯೋಜನಾ ಪ್ರದೇ ಶವೆಂದು ಸರಕಾರದ ಸುತ್ತೋಲೆಯ ಆದೇಶವನ್ನು ಸರ್ವಾನುಮತದಿಂದ ಸಭೆ ತಿರಸ್ಕರಿಸಿತು. ಇದರ ತಡೆಯ ಬಗ್ಗೆ ನ್ಯಾಯಾಲಯದ ಆದೇಶವಿರುವದಾಗಿ ಅಧ್ಯಕ್ಷ ಜೀವನ್ ಸಭೆಗೆ ತಿಳಿಸಿದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣವಾಗಿ ನಿಷೇಧಿಸುವುದು. ಮಳೆಯ ಮನ್ನೆಚ್ಚರಿಕೆಯಾಗಿ ಮುಂಜಾಗರೂ ಕತೆಯ ಕಾಮಗಾರಿ ತುರ್ತಾಗಿ ಕೈಗೊಳ್ಳುವುದು. ಶನಿವಾರ ದಿನ ದಖ್ಖನಿ ಮೊಹಲ್ಲಾದ ಬಳಿ ರಾತ್ರಿ 9ಗಂಟೆ ವೇಳೆ ದರೋಡೆ ಯತ್ನ ನಡೆದಿರುವದರಿಂದ ಪಟ್ಟಣದ ಆಯ್ದ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಡಿ.ಪಿ ರಾಜೇಶ್ ಸಭೆಗೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಭಿಯಂತರ ಎನ್.ಪಿ. ಹೇಮ್ ಕುಮಾರ್ ಅವರು ಈಗಾಗಲೇ ಮೂರು ಸಿ.ಸಿ.ಕ್ಯಾಮರಾಕ್ಕೆ ಕೊಟೇಶನ್ ತರಿಸಿ ಅಳವಡಿಕೆಗೆ ಸಿದ್ದಪಡಿಸಲಾಗಿದೆ. ಜೊತೆಯಲ್ಲಿಯೇ ಇನ್ನು ಮೂರು ಸಿ.ಸಿ.ಕ್ಯಾಮೆರಾವನ್ನು ತರಿಸಲಾಗುವದು ಎಂದು ಹೇಳಿದರು.

ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಪಟ್ಟಣ ಪಂಚಾಯಿತಿಯ ಸವಲತ್ತುಗಳನ್ನು ವಿತರಿಸುವಾಗ ಅರ್ಹ ಫಲಾನುಭವಿಗಳನ್ನು ಗುರುತಿಸುವದು ಹಾಗೂ ವಿದ್ಯಾ ಕ್ಷೇತ್ರದಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೂ ಸಹಾಯ ಧನ ನೀಡುವಂತೆ ಸಭೆಗೆ ತಿಳಿಸಿದರು.

ಎಂ.ಕೆ.ದೇಚಮ್ಮ ಮಾತನಾಡಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾಂಕ್ರಿಟ್ ಸ್ಲ್ಯಾಬ್‍ಗಳು ದುಸ್ಥಿತಿಯಲ್ಲಿವೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೊಸ ಸ್ಲ್ಯಾಬ್‍ಗಳನ್ನು ಮಳೆಗಾಲದ ಮುಂಚೆಯೇ ಹಾಕುವಂತೆ ಸಭೆಯನ್ನು ಒತ್ತಾಯಿಸಿದರು.

ಕುಡಿಯುವ ನೀರು ಪೊರೈಕೆ ವಿಭಾಗದ ನೌಕರರು ಸರಿಯಾದ ರೀತಿಯಲ್ಲಿ ಸೇವೆಯಲ್ಲಿ ಜವಾಬ್ದಾರಿ ವಹಿಸುತ್ತಿಲ್ಲ. ಅವರಲ್ಲಿ ಸೋಮಾರಿತನ ಎದ್ದು ಕಾಣುತ್ತಿದೆ. ನೌಕರರ ಕರ್ತವ್ಯದಲ್ಲಿ ವ್ಯತ್ಯಯ ಉಂಟಾದಾಗ ನೀರು ಪೊರೈಕೆಯಲ್ಲಿಯೂ ವ್ಯತ್ಯಯ ಉಂಟಾಗುತ್ತಿದೆ. ಇಂತಹ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸರ್ವ ಸದಸ್ಯರು ಅಧ್ಯಕ್ಷರು ಆಗ್ರಹಿಸಿದರು.

ಕೊಡಗಿನಲ್ಲಿ ಜಿಲ್ಲಾಧಿಕಾರಿ ಯಾಗಿದ್ದು ಈಚೆಗೆ ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಅನುರಾಗ್ ತಿವಾರಿಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಹೊಸದಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಾಂಡಂಡ ರಚನ್ ಮೇದಪ್ಪ ಉಪಸ್ಥಿತರಿದ್ದರು.