ಸುಂಟಿಕೊಪ್ಪ, ಮೇ 22: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಜ್ಞಾಪಕಾರ್ಥ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಎಫ್.ಸಿ. ಪನ್ಯ ಮತ್ತು ಮೆರೆಡಿಯನ್ ಕಾಲೇಜು ಎಫ್.ಸಿ. ಉಳ್ಳಾಲ ತಂಡಗಳು ಗೆಲುವು ಸಾಧಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆಯಿಟ್ಟವು ಸೋಮವಾರ ನಡೆದ ಮೊದಲನೇ ಪಂದ್ಯಾವಳಿಯು ಸ್ವರ್ಣ ಎಫ್.ಸಿ. ಮಂಡ್ಯ ಹಾಗೂ ಪನ್ಯ ಎಫ್.ಸಿ. ತಂಡಗಳ ನಡುವೆ ಬಹು ರೋಚಕತೆಯಿಂದ ಕೂಡಿತ್ತು.

2 ತಂಡಗಳ ನಡುವಿನ ರೋಮಾಂಚನಕಾರಿ ಪ್ರದರ್ಶನದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸಿತು. 2 ತಂಡದ ಆಟಗಾರರು ಕ್ರೀಡಾಸಕ್ತರಿಗೆ ಎಲ್ಲಿಯೂ ನಿರಾಸೆ ಮೂಡಿಸದೇ ಆಕ್ರಮಣಕಾರಿ ಆಟವಾಡಿದವು. 2 ತಂಡಗಳ ಪೈಪೋಟಿಯಿಂದ ಪಂದ್ಯದಲ್ಲಿ ಗೋಲುಗಳಿಸದ ಕಾರಣ ಟ್ರೈ ಬ್ರೇಕರ್ ನೀಡಲಾಯಿತು. ಪನ್ಯ ತಂಡದ ಗೋಲು ಕೀಪರ್ ಮಾಡಿದ ಕ್ಷೇತ್ರ ರಕ್ಷಣೆಯಿಂದ ಮಂಡ್ಯ ತಂಡವು 4-2 ಗೋಲುಗಳಿಂದ ಸೋಲನ್ನು ಅನುಭವಿಸಿ ಪನ್ಯ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಎರಡನೇ ಪಂದ್ಯವು ಕೂರ್ಗ್ ಇಲವೆನ್ ಮತ್ತು ಮೆರೆಡಿಯನ್ ಕಾಲೇಜು ಎಫ್.ಸಿ. ಉಳ್ಳಾಲ ನಡುವೆ ರೋಚಕತೆಯಿಂದ ಕೂಡಿತ್ತು. ಪಂದ್ಯದ ಮೊದಲಾರ್ಧದಲ್ಲಿ ಕೊಡಗು ತಂಡದ ನಾಯಕ ಮತ್ತು ಮುನ್ನಡೆ ಆಟಗಾರ ಶೇಖರ್ 4ನೇ ನಿಮಿಷದಲ್ಲಿ ಹೊಡೆದ ಚೆಂಡನ್ನು ಉಳ್ಳಾಲ ತಂಡದ ಗೋಲುಕೀಪರ್ ಚೆಂಡು ಹೊರಹೋಗುತ್ತಿರುವದಾಗಿ ಭಾವಿಸಿದ ತಪ್ಪಿಗೆ ಅದು ಗೋಲಾಗಿ ಪರಿವರ್ತನೆಗೊಂಡಿತು. ಧೃತಿಗೆಡದ ಉಳ್ಳಾಲ ತಂಡ ನಂತರ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಆದರೆ ಕೊಡಗು ತಂಡದ ಗೋಲ್‍ಕೀಪರ್ ಚಾಕಚಕ್ಯತೆ ತೋರಿ ಗೋಲು ಗಳಿಸುವದನ್ನು ವಿಫಲಗೋಳಿಸಿದರು. ಇದರಿಂದ ಪಂದ್ಯದ ಮೊದಲಾರ್ಧದಲ್ಲಿ ಕೊಡಗು ತಂಡ 1-0 ಗೋಲುಗಳ ಮುನ್ನಡೆ ಸಾಧಿಸಿತು. ದ್ವಿತಿಯಾರ್ಧದಲ್ಲಿ 2 ತಂಡಗಳು ಸಮಬಲ ಹೋರಾಟ ನಡೆಸಿದವು. ಇನ್ನೇನು ಅಂಪೈರ್ ಆಟ ಮುಗಿಸಲು ಸೀಟಿ ಊದಬೇಕು ಎನ್ನುವ ಕ್ಷಣದಲ್ಲಿ ಉಳ್ಳಾಲ ತಂಡದ ಕಬೀರ್ ಗೋಲನ್ನು ಹೊಡೆದು 1-1 ಸಮಬಲ ಸಾಧಿಸಿದರಿಂದ ಟ್ರೈ ಬ್ರೇಕರ್ ನೀಡಲಾಯಿತು. ಇದರಲ್ಲಿ ಉಳ್ಳಾಲ ತಂಡವು 4-3 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.