ಮಡಿಕೇರಿ, ಮೇ 22: ಆ್ಯಕ್ಸಿಸ್ ಬ್ಯಾಂಕ್ ಮಂಗಳೂರು ಯೆಯ್ಯಾಡಿ ಶಾಖೆಯಿಂದ ಬೆಂಗಳೂರಿನ ಕೋರಮಂಗಲ ಶಾಖೆಗೆ ಸಾಗಿಸುತ್ತಿದ್ದ ರೂ. 7.50 ಕೋಟಿ ದೋಚಿದ್ದ ಪ್ರಕರಣ ಸಂಬಂಧ ಮಂಗಳೂರು ಕಂಕನಾಡಿ ಠಾಣಾ ಪೊಲೀಸರು ಎಸಿಪಿ ಎನ್.ಎಸ್. ಶೃತಿ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದು ವರೆಸಿದ್ದಾರೆ. ತಲೆಮರೆಸಿ ಕೊಂಡಿರುವ ಆರೋಪಿಗಳಿಗಾಗಿ ಕೊಡಗಿನಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 11ರಂದು ದೂರು ದಾಖಲಾದ ಬೆನ್ನಲ್ಲೇ ಆರೋಪಿಗಳ ಜಾಡು ಹಿಡಿದು ಕೊಡಗಿಗೆ ಬಂದಿರುವ ಮಂಗಳೂರು ಪೊಲೀಸರು, ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ನೆರವಿನೊಂದಿಗೆ ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮವನ್ನು ಹೊಕ್ಕು ಕಾರ್ಯಾಚರಣೆ ಕೈಗೊಂಡಿದ್ದರು.

ಈ ಸಂದರ್ಭ ಅದೇ ಗ್ರಾಮದ ಕಾಶಿ ಕಾರ್ಯಪ್ಪ ಎಂಬಾತನಿಂದ ದುಷ್ಕøತ್ಯದ ಇತರ ಆರೋಪಿಗಳು ತಂಬುಗುತ್ತಿ ಎಂಬಲ್ಲಿನ ಕಾಡಿನಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಕಾಶಿ ಕಾರ್ಯಪ್ಪನ ಮೂಲಕವೇ ತಂಬುಗುತ್ತಿಯ ಅಡಗುದಾಣವನ್ನು ಸುತ್ತುವರಿದಿದ್ದರು.

ಪೊಲೀಸರ ಧಾಳಿ ಸಂದರ್ಭ ಪ್ರಮುಖ ಆರೋಪಿಗಳಾದ ಟಿ.ಎ. ಭೀಮಯ್ಯ, ಟಿ.ಎ. ಉತ್ತಪ್ಪ ಹಾಗೂ ಟಿ.ಪಿ. ಬಸಪ್ಪ ಪರಾರಿಯಾದರೆ, ಟಿ.ಎ. ಪೂವಣ್ಣ ಹಾಗೂ ಕರಿಬಸಪ್ಪ ನಗದು ಸಹಿತ ಸೆರೆ ಸಿಕ್ಕಿದ್ದರು. ಸೆರೆಸಿಕ್ಕ ಆರೋಪಿಗಳು ಮೂರು ಚೀಲಗಳಲ್ಲಿ (ಭುಜದ ಬ್ಯಾಗ್)

(ಮೊದಲ ಪುಟದಿಂದ) ತುಂಬಿಸಿಟ್ಟುಕೊಂಡಿದ್ದ ರೂ. 5.88 ಕೋಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಾಶಿ ಕಾರ್ಯಪ್ಪ ಹಾಗೂ ಇತರರು ಬೇರೆಡೆ ಬಚ್ಚಿಟ್ಟಿದ್ದ ಒಂದಿಷ್ಟು ಹಣ ಸೇರಿದಂತೆ ಒಟ್ಟು ರೂ. 6 ಕೋಟಿ ಮೂವತ್ತೆರಡು ಲಕ್ಷದ ನಲವತ್ತಾರು ಸಾವಿರ ಇದುವರೆಗೆ ಪೊಲೀಸ್ ವಶವಾಗಿದೆ.

ಬಹುರಾಷ್ಟ್ರೀಯ ಕಂಪೆನಿಗಳ ಭಾರೀ ಮೊತ್ತದ ಹಣವನ್ನು ನಿತ್ಯ ಬ್ಯಾಂಕ್ ಖಾತೆಗೆ ಜಮೆಗೊಳಿಸುವ ಏಜೆನ್ಸಿಗಳಲ್ಲಿ ಒಂದಾಗಿರುವ ಎಸ್.ಎ.ಎಸ್. ಪ್ರೊಸೆಗುರ್ ಹೋಲ್ಡಿಂಗ್ ಕಂಪನಿಯ ‘ಕಸ್ಟೋಡಿಯನ್' ಆಗಿದ್ದ ಪರಶುರಾಮ ಸಾಹು ಕೂಡ ಇಡೀ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ. ತಾ. 11ರಂದು ಬೆಂಗಳೂರಿಗೆ ಮಂಗಳೂರಿನಿಂದ ಹಣ ಸಾಗಿಸುವ ವೇಳೆ, ಸಂಬಂಧಿಸಿದ ವಾಹನ ಮಡಿಕೇರಿ ತಲಪುತ್ತಿದ್ದಂತೆಯೇ, ಆರೋಪಿಗಳು ಮಾರ್ಗ ಬದಲಾಯಿಸಿದಾಗ, ಪರಶುರಾಮ ಆಕ್ಷೇಪ ವ್ಯಕ್ತಪಡಿಸಿದ್ದು, ಅವರಿಗೆ ಆರೋಪಿಗಳು ಥಳಿಸಿ ಕುಂಬಾರಗಡಿಗೆಯ ಕಾಡಿನಲ್ಲಿ ಕಟ್ಟಿಹಾಕಿದ್ದರೆಂದು ಪೊಲೀಸರು ಖಚಿತಪಡಿಸಿದ್ದಾರೆ.

ಹೀಗಾಗಿ ಸೂರ್ಲಬ್ಬಿಯ ಮನುಕುಮಾರ್ ಹಾಗೂ ಪರಶುರಾಮ ಸಾಹು ರೂ. 7.50 ಕೋಟಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಸಾಕ್ಷ್ಯ ಒದಗಿಸಿದವರೆಂದು ಪರಿಗಣಿಸಲಾಗಿದೆ. ಇನ್ನುಳಿದ ಆರೋಪಿಗಳು ಸೆರೆಸಿಕ್ಕಿದರೆ ಮಿಕ್ಕ ಹಣ ರೂ. ಒಂದು ಕೋಟಿ ಹದಿನೇಳು ಲಕ್ಷದ ಐವತ್ತನಾಲ್ಕು ಸಾವಿರವನ್ನು ಪತ್ತೆಹಚ್ಚಲು ಸಾಧ್ಯವೆಂದು ಪೊಲೀಸ್ ತನಿಖಾ ತಂಡ ಅಭಿಪ್ರಾಯಪಟ್ಟಿದೆ. ದುಷ್ಕøತ್ಯದ ಹತ್ತು ದಿನ ಬಳಿಕವೂ ನಾಪತ್ತೆಯಾಗಿರುವ ಇತರ ಆರೋಪಿಗಳು ಕುಂಬಾರಗಡಿಗೆ ಕಾಡಿನಲ್ಲೇ ಅಡಗಿರುವ ಶಂಕೆ ಹೊಂದಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿ ಶೃತಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಇನ್ಸ್‍ಪೆಕ್ಟರ್ ರವೀಶ್ ನಾಯಕ್ ತಂಡ ಕೊಡಗಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಅಲ್ಲದೆ ಬೆಂಗಳೂರಿನಲ್ಲಿ ಗನ್‍ಮ್ಯಾನ್‍ಗಳಾಗಿರುವ ಕೊಡಗಿನ ಕೆಲವು ಯುವಕರು, ಈ ಹಿಂದೆಯೂ ಇಂತಹ ಸಣ್ಣಪುಟ್ಟ ಕೃತ್ಯಗಳಲ್ಲಿ ಭಾಗಿಯಾಗಿ ಇದೀಗ ತಲೆಮರೆಸಿಕೊಂಡಿರುವದು ಬೆಳಕಿಗೆ ಬಂದಿದೆ. ರೂ. 7.50 ಕೋಟಿ ಪ್ರಕರಣದ ಬೆನ್ನಲ್ಲೇ ಅನೇಕರು ಏಜೆನ್ಸಿ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿ ಕೆಲಸ ಕಳೆದುಕೊಂಡಿರುವ ಬಗ್ಗೆಯೂ ತಿಳಿದುಬಂದಿದೆ.