ಸೋಮವಾರಪೇಟೆ, ಮೇ 22: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಢೀರ್ ಧಾಳಿ ನಡೆಸಿದ ಅಧಿಕಾರಿಗಳು, ತಂಬಾಕು ಮಾರಾಟ ಕಾಯ್ದೆಯಲ್ಲಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಬಹುತೇಕ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದರು.ಇಲ್ಲಿನ ಪತ್ರಿಕಾಭವನದಲ್ಲಿ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿದ ತಂಬಾಕು ಉತ್ಪನ್ನ ನಿಯಂತ್ರಣ ಮಂಡಳಿಯ ನೋಡಲ್ ಅಧಿಕಾರಿ ಜಾನ್ ಕೆನಡಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಶಿವರಾಮು ಅವರುಗಳು ತಂಬಾಕು ಮಾರಾಟದ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ವಿವಿಧ ಇಲಾಖಾಧಿಕಾರಿಗಳು ಕೈ ಜೋಡಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧವಿದ್ದು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳೂ ಸಹ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವದು ಎಂದು ಜಾನ್ ಕೆನಡಿ ಸೂಚಿಸಿದರು.

ಸಾರ್ವಜನಿಕರನ್ನು ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದಿಂದ ಸರ್ಕಾರ ಕಠಿಣ ಕಾನೂನು ತಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದು ಅಪರಾಧ, ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನ ಮಾಡುವಂತಿಲ್ಲ. 18 ವರ್ಷದೊಳಗಿನ ವ್ಯಕ್ತಿಗಳಿಗೆ ಉತ್ಪನ್ನ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಈಗಾಗಲೇ ಅಂಗಡಿ, ಹೊಟೇಲ್ ಮಾಲೀಕರಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಶಿವರಾಮು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಪಂ ಪಿಡಿಒಗಳು, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಅಬಕಾರಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ, ಪಟ್ಟಣದ ಅಂಗಡಿಗಳಲ್ಲಿ ತಂಬಾಕು ಮಾರಾಟ ಕಾಯ್ದೆಯ ನಿಯಮಗಳು ಅನುಷ್ಠಾನಗೊಂಡಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣದ ಬಹುತೇಕ ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಹೊಟೇಲ್, ಬ್ಯಾಂಕ್‍ಗಳಲ್ಲಿ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸದ ಹಿನ್ನೆಲೆ ದಂಡ ವಿಧಿಸಲಾಯಿತು. ಈ ಸಂದರ್ಭ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಕಾಯ್ದೆಯ ಬಗ್ಗೆ ಯಾವದೇ ಮಾಹಿತಿ ನೀಡದೇ ಏಕಾಏಕಿ ದಂಡ ವಿಧಿಸುತ್ತಿರುವದು ಸರಿಯಲ್ಲ ಎಂದು ಕೆಲ ಅಂಗಡಿ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ, ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಅಧಿಕಾರಿಗಳು ತೋರಿಸಿ ಮಾಲೀಕರ ಬಾಯಿ ಮುಚ್ಚಿಸಿದರು. ಅಂಗಡಿಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧ ಫಲಕ ಅಳವಡಿಸಬೇಕು. ತಂಬಾಕು ಉತ್ಪನ್ನಗಳನ್ನು ಪ್ರದರ್ಶನ ಮಾಡಬಾರದು. ತಪ್ಪಿದಲ್ಲಿ ಇನ್ನಷ್ಟು ಕಠಿಣ ಕ್ರಮ ಜರುಗಿಸುವದಾಗಿ ಎಚ್ಚರಿಸಿದರು.

ಕೆಲ ಬ್ಯಾಂಕ್‍ಗಳಿಗೆ ತೆರಳಿದ ಅಧಿಕಾರಿಗಳು, ಬ್ಯಾಂಕ್‍ನ ಒಳಭಾಗ ಫಲಕ ಅಳವಡಿಸದೇ ಇದ್ದುದರಿಂದ 200 ರೂಪಾಯಿಗಳಷ್ಟು ದಂಡ ವಿಧಿಸಿದರು. ಪೊಲೀಸ್ ವೃತ್ತನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಮಂಚಯ್ಯ, ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಆನಂದ್ ಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.