ಮಡಿಕೇರಿ, ಮೇ 22: ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವೀರಾಜಪೇಟೆ ತಾಲೂಕು, ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಕಳೆದ ಒಂದು ವಾರಗಳಿಂದ ಕಾಕೋಟುಪರಂಬು ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಬಾಲಕರ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇಂದು ನಡೆಯಿತು.ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು 37 ಮಂದಿ ಬಾಲಕರು ಶಿಬಿರಾರ್ಥಿಗಳಾಗಿ ಭಾಗವಹಿಸಿ ತರಬೇತಿ ಪಡೆದರು. ಹಾಕಿ ತರಬೇತುದಾರರಾಗಿ ಅಮ್ಮಂಡಿರ ಚೇತನ್, ಮೂಳೇರ ಪೂವಯ್ಯ, ನೆಲ್ಲಮಕ್ಕಡ ಪವನ್, ಧೀರಜ್, ಮೇವಡ ಬೆಳ್ಯಪ್ಪ ತರಬೇತಿ ನೀಡಿದರು.

ಪೊನ್ನಂಪೇಟೆ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀ ಬೋಧ ಸ್ವರೂಪಾನಂದ ಸ್ವಾಮೀಜಿ, ಆಶ್ರಮದ ವೈದ್ಯ ಡಾ. ಅಲ್ಲಮಪ್ರಭು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ. ಸೀತಾರಾಮ್, ರಾಜೇಶ್ ಹಾಗೂ ಇತರರು ಶಿಬಿರಕ್ಕೆ ಆಗಮಿಸಿ ದೇಶಭಕ್ತಿಯನ್ನು ಮೂಡಿಸಿಕೊಳ್ಳುವಂತಹ ಮಹಾ ಪುರುಷರ ಕಥೆ, ಬೌದ್ಧಿಕ್ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಸಂಘದ ಕೊಡಗು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಾಜಿ ಪಾಲ್ಗೊಂಡು ಶಿಬಿರಾರ್ಥಿಗಳು ಇಲ್ಲಿ ಕಲಿತ ಶಿಕ್ಷಣ, ಶಿಸ್ತನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರುವಂತಾಗಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಮೇವಡ ಚಿಣ್ಣಪ್ಪ ವಹಿಸಿ ಮಾತನಾಡಿ, ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಕಠಿಣ ಅಭ್ಯಾಸದಲ್ಲಿ ತೊಡಗಿದಾಗ ಪ್ರತಿಫಲ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ, ಹಾಕಿ ಪ್ರದರ್ಶನ ಪಂದ್ಯಾಟ ನಡೆಯಿತು. ಈ ಸಂದರ್ಭ ಶಿಬಿರಾರ್ಥಿಗಳ ಪೋಷಕರು, ತರಬೇತುದಾರರು ಹಾಗೂ ಇನ್ನಿತರರು ಇದ್ದರು. ಶಿಬಿರಾಧಿಕಾರಿ ಮೂವೇರ ಸುಬ್ಬಯ್ಯ ಶಿಬಿರದ ವರದಿ ವಾಚಿಸಿದರು. ಆರ್.ಎಸ್.ಎಸ್.ನ ವೀರಾಜಪೇಟೆ ತಾಲೂಕು ಪ್ರಮುಖ್ ಕಿರಣ್ ಕಾಯರ ಸ್ವಾಗತಿಸಿ, ಸಂಘ ಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ವಂದಿಸಿದರು.