ತಿವಾರಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಲಖನೌ, ಮೇ 22 : ಕರ್ನಾಕಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸೋಮವಾರ ಸಿಬಿಐಗೆ ಶಿಫಾರಸು ಮಾಡಿದೆ. ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತಿರುವದಾಗಿ ಉತ್ತರ ಪ್ರದೇಶ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ತಿಳಿಸಿದ್ದಾರೆ. ಇಂದು ಬೆಳಗ್ಗೆಯಷ್ಟೇ ಅನುರಾಗ್ ತಿವಾರಿ ಕುಟುಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದರು. ಬಳಿಕ ಲಖೌನ ಹಜರತ್ ಗಂಜ್ ಪೆÇಲೀಸ್ ಠಾಣೆಗೆ ತೆರಳಿ ಕೊಲೆ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಐಎಎಸ್ ಅಧಿಕಾರಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಕಳೆದ ಮೇ 17ರಂದು ಲಖನೌನ ಹಜರತ್ ಗಂಜ್ ಮೀರಾಬಾಯ್ ರೆಸ್ಟ್ ಹೌಸ್ ಬಳಿ 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಶವ ಪತ್ತೆಯಾಗಿತ್ತು. ರಾಜ್ಯದ ಐಎಎಸ್ ಅಧಿಕಾರಿ ತಮ್ಮ 36ನೇ ಹುಟ್ಟುಹಬ್ಬದಂದೆ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅನುರಾಗ್ ತಿವಾರಿ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅಧಿಕಾರಿಯ ಕುಟುಂಬ ಸೋಮವಾರ ಕೊಲೆ ಪ್ರಕರಣ ದಾಖಲಿಸಿದೆ. ಲಖೌನನ ಹಜರತ್ ಗಂಜ್ ಪೆÇಲೀಸ್ ಠಾಣೆಗೆ ಇಂದು ಅವರ ಸಹೋದರ ಮಾಯಾಂಕ್ ತಿವಾರಿ ಅವರು ದೂರು ನೀಡಿದ್ದು, ಐಪಿಸಿ ಸೆಕ್ಷೆನ್ 302ರಡಿ ಉತ್ತರ ಪ್ರದೇಶ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎವರೆಸ್ಟ್ ಪರ್ವತಾರೋಹಿ ಶವವಾಗಿ ಪತ್ತೆ

ಕಠ್ಮಂಡು, ಮೇ : ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರಿ ವಿಜಯ ಪತಾಕೆ ಹಾರಿಸಿದ್ದ ಉತ್ತರ ಪ್ರದೇಶದ ರವಿ ಕುಮಾರ್ ಅವರು ಪರ್ವತದಿಂದ ಇಳಿಯುವಾಗ ಸುಮಾರು 200 ಮೀಟರ್ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರವಿ ಕುಮಾರ್ ಪರ್ವತ ಶಿಖರ ಏರಿದ ಬಳಿಕ ವಾಪಸ್ ಬರುವಾರ ಬಾಲ್ಕೋನಿ ಎಂಬ ಪ್ರದೇಶದಲ್ಲಿ ಸುಮಾರು 150ರಿಂದ 200 ಮೀಟರ್ ಆಳಕ್ಕೆ ಬಿದ್ದು ಮೃತಪಟ್ಟಿರುವದಾಗಿ ಮೌಂಟ್ ಎವರೆಸ್ಟ್ ನಲ್ಲಿರುವ ನಮ್ಮ ಸಂಪರ್ಕ ಕಚೇರಿಯ ಅಧಿಕಾರಿ ಖಚಿತಪಡಿಸುವದಾಗಿ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ದಿನೇಶ್ ಭಟ್ಟಾರಿಯಾ ಹೇಳಿದ್ದಾರೆ. ಬಾಲ್ಕೋನಿ ಪರ್ವಾತರೋಹಿಗಳು ವಿಶ್ರಮಿಸುವ ಕೊನೆಯ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.

ತ್ರಿವಳಿ ತಲಾಕ್ ನೀಡುವವರಿಗೆ ಬಹಿಷ್ಕಾರ

ನವದೆಹಲಿ, ಮೇ 22 : ತ್ರಿವಳಿ ತಲಾಕ್ ನೀಡುವವರಿಗೆ ಸಮಾಜದಿಂದ ಬಹಿಷ್ಕಾರ ಹಾಕುವದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಸೋಮವಾರ ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ. ತ್ರಿವಳಿ ತಲಾಕ್ ಗೆ ಸಂಬಂಧಿಸಿದಂತೆ ಮುಸ್ಲಿಂ ಕಾನೂನು ಮಂಡಳಿ ಇಂದು ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಮದುಮಗನಿಗೆ ತ್ರಿವಳಿ ತಲಾಕ್ ನೀಡದಂತೆ ಸೂಚಿಸಿ ಎಂದು ಖ್ವಾಜಿಗಳಿಗೆ ಸಲಹೆ ನೀಡಲಾಗುವದು. ಅಲ್ಲದೆ ವೆಬ್ ಸೈಟ್, ಪ್ರಕಟಣೆ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ತ್ರಿವಳಿ ತಲಾಕ್ ಹೇಳದಂತೆ ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದೆ. ಮದುವೆ ಸಂದರ್ಭದಲ್ಲೇ ವರನಿಗೆ ದಾಂಪತ್ಯದಲ್ಲಿ ಬಿರುಕು ಬಿಟ್ಟಾಗ ಮೂರು ಬಾರಿ ತಲಾಕ್ ಹೇಳದಂತೆ ಹಾಗೂ ಇದು ಶರಿಯತ್ ವಿರುದ್ಧವಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿಯ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.

ಬಾಬ್ರಿ ಮಸೀದಿ ಧ್ವಂಸ : ನಾಳೆ ವಿಚಾರಣೆ

ಲಖನೌ, ಮೇ 22 : 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಮೇ 24 ಕ್ಕೆ ನಿಗದಿಪಡಿಸಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮೇ.22 ಕ್ಕೆ ನಿಗದಿಯಾಗಿತ್ತು. ಆದರೆ ಪ್ರಕರಣದ ಓರ್ವ ಆರೋಪಿ ಸತೀಶ್ ಪ್ರಧಾನ್ ಕೋರ್ಟ್ ಗೆ ಹಾಜರಾಗದೇ ಇದ್ದ ಕಾರಣ ಕೋರ್ಟ್ ಮುಂದಿನ ವಿಚಾರಣೆಯನ್ನು ಮೇ.24 ಕ್ಕೆ ನಿಗದಿಪಡಿಸಿದೆ. ತಾ. 20 ರಂದು ವಿಚಾರಣೆಯನ್ನು ಪ್ರಾರಂಭಿಸಿದ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಾಗಿರುವ ಐವರು ವಿಹೆಚ್ ಪಿ ನಾಯಕರಿಗೆ ಜಾಮೀನು ಮಂಜೂರು ಮಾಡಿತ್ತು. ಬಾಬ್ರಿ ಮಸೀದಿ ಪ್ರಕರಣದ ಸಂಬಂಧ ವಿಚಾರಣೆಯನ್ನು ಪ್ರಾರಂಭಿಸಿ ಎರಡು ವರ್ಷಗಳಲ್ಲಿ ತೀರ್ಪು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಏ.19 ರಂದು ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲು ಪ್ರಾರಂಭಿಸಿದೆ.

ಬಸ್ ಮೇಲೆ ಬಂಡೆ ಬಿದ್ದು 5 ಸಾವು

ಅಲ್ಮೋರಾ(ಉತ್ತರಖಂಡ್), ಮೇ 22 : ಖಾಸಗಿ ಬಸ್ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಅಲ್ಮೋರಾದ ಕಕ್ಕ್ರಿಘಾಟ್ ಬಳಿ ಸಂಭವಿಸಿದೆ. ಉತ್ತರಾಖಂಡದಲ್ಲಿ ಭಾರೀ ಭೂಕುಸಿತ ಸಂಭವಿಸುತ್ತಿದ್ದು 14 ಸಾವಿರ ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈ ಮಧ್ಯೆ ಬಂಡೆಯೊಂದು ಬಸ್ ಮೇಲೆ ಉರುಳಿ ಬಿದಿದ್ದು ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ಸ್ಥಳಕ್ಕೆ ಬಂದ ಪೆÇಲೀಸರು ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಲ್ಲಿದ್ದಲು ಹಗರಣ : ಅಧಿಕಾರಿಗಳಿಗೆ 2 ವರ್ಷ ಜೈಲು

ನವದೆಹಲಿ, ಮೇ 22 : ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಹಾಗೂ ಇತರೆ ಇಬ್ಬರು ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಸೋಮವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಧ್ಯ ಪ್ರದೇಶದ ಖಾಸಗಿ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಗುಪ್ತಾ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಸಾಬೀತಾಗಿದ್ದು, ಸಿಬಿಐ ವಿಶೇಷ ಕೋರ್ಟ್ ಕಳೆದ ಶುಕ್ರವಾರ ಗುಪ್ತಾ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಡಿಸೆಂಬರ್ 31, 2005ರಿಂದ ನವೆಂಬರ್ 2008ರವರೆಗೆ ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿಯಾಗಿದ್ದ ಗುಪ್ತಾ, ಅಂದಿನ ಜಂಟಿ ಕಾರ್ಯದರ್ಶಿ ಕೆ.ಎಸ್. ಕ್ರೊಫಾ ಹಾಗೂ ಕಲ್ಲಿದ್ದಲು ಸಚಿವಾಲಯದ ಅಂದಿನ ನಿರ್ದೇಶಕರಾಗಿದ್ದ ಕೆ.ಸಿ. ಸಮರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ ಗಣಿ ಕಂಪನಿ ಕೆಎಸ್‍ಎಸ್ಪಿಎಲ್ ಗೆ ಒಂದು ಕೋಟಿ ರೂಪಾಯಿ ದಂಡ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಅಹ್ಲುವಾಲಿಯಾಗೆ ಮೂರು ವರ್ಷ ಜೈಲು ಮತ್ತು 30 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸನಗೌಡ ಆಯ್ಕೆ

ಬೆಂಗಳೂರು, ಮೇ 22 : ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದ ಶಾಸಕ ಸಿಂಧನೂರು ಹಂಪನಗೌಡ ಬಾದರ್ಲಿ ಸೋದರಳಿಯ ಬಸನಗೌಡ ಬಾದರ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೆ.ಕೆಂಪರಾಜು, ಕೆ.ಶಿವಕುಮಾರ್, ಆರ್. ರಾಜೇಂದ್ರ ಹಾಗೂ ಸುಮಯ್ಯಾ ತಬ್ರೇಝ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಪ್ರಧಾನ ಕಾರ್ಯದರ್ಶಿಗಳಾಗಿ 11 ಮಂದಿ ಹಾಗೂ ಕಾರ್ಯದರ್ಶಿಗಳಾಗಿ 35 ಮಂದಿ ಆಯ್ಕೆಯಾಗಿದ್ದಾರೆ. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಂಬಂಧಿ ಕೆ. ಕೆಂಪರಾಜು, ಶಾಸಕ ಹಂಪನಗೌಡ ಬಾದರ್ಲಿ ಸಂಬಂಧಿ ಬಸನಗೌಡ ಬಾದರ್ಲಿ, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಪುತ್ರ ಆರ್. ರಾಜೇಂದ್ರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೆÇೀಟಿ ಏರ್ಪಟ್ಟಿತ್ತು.