ಮಡಿಕೇರಿ, ಮೇ 22: ಬಂದೂಕು ಬಳಸಲು ಪರವಾನಗಿಯೊಂದಿದ್ದರೆ, ಮಾತ್ರ ಸಾಲದು ಕಾನೂನಿನ ಅರಿವು ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು.ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಮೈತ್ರಿ ಭವನದಲ್ಲಿ ಏರ್ಪಡಿಸಲಾಗಿರುವ ನಾಗರಿಕರಿಗೆ ಬಂದೂಕು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂದೂಕು ಬಳಸಲು ಪರವಾನಗಿ ಇದೆ ಎಂದು ಮನಸೋ ಇಚ್ಛೆ ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾವದೇ ಸಂದರ್ಭದಲ್ಲೂ ಬಂದೂಕಿನಿಂದ ಜೀವಹಾನಿ ಉಂಟಾದರೆ, ಬೇರೊಬ್ಬರನ್ನು ಗಾಯಗೊಳಿಸಿದರೆ, ಅದರ ಉದ್ದೇಶ ಒಳ್ಳೆಯದಿದ್ದರೆ, ಅದನ್ನು ಸಂಬಂಧಿಸಿದವರು ಸಾಬೀತುಪಡಿಸಬೇಕು. ಒಂದು ವೇಳೆ ದುರುದ್ದೇಶವೆ ಆಗಿದ್ದರೆ, ಕಾನೂನಿನಡಿ ಕ್ರಮ ಎದುರಿಸಬೇಕಾಗುತ್ತದೆ. ಬಂದೂಕು ಬಳಕೆ ಸಂಬಂಧ ಕಾನೂನಿನಡಿ ಹಲವಾರು ಕಾಯ್ದೆಗಳಿವೆ. ಅವುಗಳ ಬಗ್ಗೆ ಅರಿತುಕೊಂಡಲ್ಲಿ ಮಾತ್ರ ಬಂದೂಕಿನ ಸದ್ಭಳಕೆ ಸಾಧ್ಯ ಎಂದು ಎಸ್‍ಪಿ ಕಿವಿಮಾತು ಹೇಳಿದರು.
ಆರು ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಬಂದೂಕು ಬಳಕೆ ಬಗ್ಗೆ ತರಬೇತಿ ಪಡೆಯುವ ಮಂದಿ ಕೆಟ್ಟ ಕೆಲಸಗಳಿಗೆ ಅದನ್ನು ಬಳಸಿಕೊಳ್ಳಬಾರದು ಎಂದು ರಾಜೇಂದ್ರ ಪ್ರಸಾದ್ ಸಲಹೆಯಿತ್ತರು. ಶಿಬಿರದಲ್ಲಿ 33 ಮಂದಿ ನಾಗರಿಕರು ಪಾಲ್ಗೊಂಡಿದ್ದು, ತಾ. 27ರವರೆಗೆ ನಡೆಯಲಿದೆ.
7 ವರ್ಷದಲ್ಲಿ 2 ಗುಂಡು ಮಾತ್ರ ಬಳಕೆ
ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಬಂದೂಕು ಬಳಕೆ ಕುರಿತು ಕೆಲ ಉದಾಹರಣೆಗಳೊಂದಿಗೆ ವಿವರಿಸಿದರು. ತನ್ನ ಬಳಿಯು ಸ್ವಂತ ಬಳಕೆಗೆ ಒಂದು ಬಂದೂಕು ಇದೆ. ಅದರಿಂದ 25 ಸುತ್ತು ಗುಂಡು ಹಾರಿಸಬಹುದು. 2000ನೇ ಇಸವಿಯಲ್ಲಿ ಅದನ್ನು ಖರೀದಿಸಿದ್ದು, ಇದುವರೆಗೆ ಕೇವಲ 2 ಗುಂಡು ಮಾತ್ರ ಬಳಸಲ್ಪಟ್ಟಿದೆ. 23 ಗುಂಡುಗಳು ಬಾಕಿ ಉಳಿದಿವೆ. ಬಂದೂಕು ಹೊಂದಿದ್ದೇವೆ ಎಂದ ಮಾತ್ರಕ್ಕೆ ಅದನ್ನು ಬೇಕಾಬಿಟ್ಟಿ ಬಳಸುವದಲ್ಲ ಎಂಬದಕ್ಕೆ ಮೇಲಿನಂತೆ ಉದಾಹರಣೆ ನೀಡಿದರು.
ಈ ಹಿಂದೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನ ಬಳಿಯಿದ್ದ ಬಂದೂಕು ಮನೆಯಲ್ಲಿ ಕಳ್ಳ ಪೊಲೀಸ್ ಆಟವಾಡುತ್ತಿದ್ದ ಇಬ್ಬರು ಸಣ್ಣ ಮಕ್ಕಳಲ್ಲಿ ಓರ್ವನ ಕೈಗೆ ಸಿಕ್ಕಿತ್ತು. ಅದನ್ನು ತೆಗೆದುಕೊಂಡ ಆತ ಅನಾಹುತದ ಅರಿವಿಲ್ಲದೆ ತನ್ನ ತಮ್ಮನ ಮೇಲೆ ಗುಂಡು ಹಾರಿಸಿದ್ದ. ಪರಿಣಾಮ ಹುಡುಗ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗುಂಡು ಹಾರಿಸಿದ ಹುಡುಗ ಬಾಲಕರ ಬಾಲಮಂದಿರ ಸೇರಲ್ಪಟ್ಟ. ಬಂದೂಕನ್ನು ಮಕ್ಕಳ ಕೈಗೆಟುಕುವ ರೀತಿಯಲ್ಲಿ ಅದನ್ನಿಟ್ಟಿದ್ದ ತಂದೆ ಜೈಲುಪಾಲಾದ. ಆದ್ದರಿಂದ ಬಂದೂಕನ್ನು ಸುರಕ್ಷಿತ ವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅನಾಹುತ ತಪ್ಪದು ಎಂದು ರಾಜೇಂದ್ರ ಪ್ರಸಾದ್ ಎಚ್ಚರಿಕೆಯಿತ್ತರು. ಡಿವೈಎಸ್‍ಪಿ ಛಬ್ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷತಾ ಶೆಟ್ಟಿ ಪ್ರಾರ್ಥಿಸಿ, ಡಿಸಿಐಬಿ ಇನ್ಸ್‍ಪೆಕ್ಟರ್ ಕರೀಂರಾವ್‍ತರ್ ವಂದಿಸಿದರು.