ಬೇಸಿಗೆಯಲ್ಲಿ ನಾವು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಕೆಲವೊಮ್ಮೆ ನಮ್ಮ ಶರೀರದಿಂದ ಹೊರಬರುವ ದುರ್ಗಂಧ ಬೇರೆಯವರಿಗೆ ಅಸಹ್ಯ ಎನಿಸುವುದಲ್ಲದೆ, ನಮ್ಮನ್ನೂ ಮುಜುಗರಕ್ಕೀಡು ಮಾಡಿಬಿಡುತ್ತದೆ.ಬಹಳಷ್ಟು ಜನ ಮುಖದ ಕಾಳಜಿ ವಹಿಸಿ ಒಂದಷ್ಟು ಕ್ರೀಮ್, ಪೌಡರ್ ಬಳಸಿ ಸುಂದರ ವಾಗಿ ಕಾಣುವಂತೆ ನೋಡಿಕೊಳ್ಳುತ್ತಾರಾದರೂ ಶರೀರದ ಇತರ ಅಂಗಗಳತ್ತ ಗಮನಹರಿಸುವುದಿಲ್ಲ. ಇದರಿಂದಾಗಿ ಶರೀರ ದುರ್ಗಂಧ ಬೀರುತ್ತಿರುತ್ತದೆ. ನಾವು ನಮ್ಮ ಬಗ್ಗೆ ಒಂದಷ್ಟು ಆಸಕ್ತಿ ಮತ್ತು ಕಾಳಜಿ ವಹಿಸಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು ತಡೆಯಲು ಮುಂದಾಗಬೇಕು. ನಮ್ಮ ಸೌಂದರ್ಯ, ಆಕರ್ಷಣೆ ಎಲ್ಲವೂ ನಮ್ಮ ಶರೀರ ಬೀರುವ ದುರ್ಗಂಧದ ಮುಂದೆ ಗೌಣವಾಗಿ ಬಿಡುತ್ತದೆ. ಇದನ್ನು ತಡೆಯಬೇಕಾದರೆ ತಜ್ಞರು ನೀಡುವ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು.

ಬೀಡಿ, ಸಿಗರೇಟ್, ಗುಟ್ಕಾ, ನಶ್ಯ ಮುಂತಾದ ಅಭ್ಯಾಸ ಹೊಂದಿರುವವರು ಅದನ್ನು ಮೊದಲು ಬಿಡಬೇಕು. ತಾವು ಸೇದಿ ಬಂದ ಸಿಗರೇಟ್‍ನ ವಾಸನೆ ನೀವು ಎದುರು ನಿಂತು ಮಾತನಾಡುತ್ತಿರುವ ವ್ಯಕ್ತಿಗೆ ವಾಕರಿಕೆ ತರಬಹುದು.

ಬೇಸಿಗೆಯಲ್ಲಿ ಅತಿಯಾದ ಬೆವರು ಮುಜುಗರ ತರುತ್ತದೆ. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದು. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುತ್ತಿರಬೇಕು.

ಪ್ರತಿದಿನ ಕನಿಷ್ಟ ಎರಡು ಲೀಟರ್‍ನಷ್ಟು ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿ ಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ.

ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಲ್ಲುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು. ಬಾಯಿಯೊಳಗೆ ಸಿಂಪಡಿಸುವ ಕೆಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆ ಯಲ್ಲಿ ಲಭ್ಯವಿದೆ ಅದನ್ನು ಕೂಡ ಉಪಯೋಗಿಸ ಬಹುದು. ಆದರೆ ಉಪಯೋಗಿಸುವ ಮುನ್ನ ವೈದ್ಯರ ಸಲಹೆ ಅಗತ್ಯ. ಬಹಳಷ್ಟು ಜನರಿಗೆ ದೇಹದ ದುರ್ಗಂಧ ರೋಗವಲ್ಲ ಅದು ನಾವು ಶುಚಿತ್ವಕ್ಕೆ ಗಮನ ನೀಡದ್ದರಿಂದ ಬಂದಿರುವ ತೊಂದರೆ ಎಂಬುದರ ಅರಿವಿಲ್ಲ. ಮೊದಲಿಗೆ ನಮ್ಮ ಶರೀರದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಇದನ್ನು ಸುಲಭವಾಗಿ ತಡೆಯಲು ಸಾಧ್ಯವಾಗುತ್ತದೆ.

ಬೇಸಿಗೆಯಲ್ಲಿ ದೇಹ ಹೆಚ್ಚಾಗಿ ಬೆವರುವುದರಿಂದ ದುರ್ಗಂಧದ ಸಮಸ್ಯೆ ಹೆಚ್ಚಾಗಿಯೆ ಕಾಣಿಸುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ದೇಹವನ್ನು ತಂಪಾಗಿಡಲು ಹಣ್ಣು, ತರಕಾರಿ, ಸೊಪ್ಪುಗಳು,. ಸೌತೆಕಾಯಿ ಸೇವನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಇವುಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹವನ್ನು ಕಾಪಾಡುತ್ತವೆ. ಕಲ್ಲಂಗಡಿ, ಕರ್ಬೂಜ, ಸೊಗದೆಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳಿಗೆ ಆದ್ಯತೆ ನೀಡಬೇಕು.