ಮೂರ್ನಾಡು, ಮೇ 22: ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಸ್ವಜಾತಿ ಬಂಧುಗಳಿಗೆ ಎರಡು ದಿನಗಳ ಕಾಲ ನಡೆದ 4ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ನಡೆದ ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ಹಾಗೂ ಮಡಿಕೇರಿ ಸಾಮ್ರಾಟ್ ರೈ ಬ್ರದರ್ಸ್ ತಂಡ ಫೈನಲ್ ಪ್ರವೇಶಿಸಿತು. ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ಮಡಿಕೇರಿ ಸಾಮ್ರಾಟ್ ರೈ ಬ್ರದರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ,ಮಡಿಕೇರಿ ಸಾಮ್ರಾಟ್ ಬ್ರದರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಮೊದಲು ಬ್ಯಾಟ್ ಮಾಡಿದ ಮಡಿಕೇರಿ ಸಾಮ್ರಾಟ್ ಬ್ರದರ್ಸ್ ತಂಡ ನಿಗದಿತ 5 ಓವರ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್‍ಗಳ ಗುರಿ ನೀಡಿತು. ಇದನ್ನು ಬೆನ್ನತ್ತಿದ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ 4.3 ಓವರ್‍ನಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿತು.
ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ಎ ತಂಡ ವಿನರ್ಸ್ ಹಾಗೂ ಮೂರ್ನಾಡು ರೈ ವಾರಿಯರ್ಸ್ ಬಿ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡವು ಪುರುಷರ ಹಗ್ಗಜಗ್ಗಾಟದಲ್ಲಿ ವೀರಾಜಪೇಟೆ ಮಲ್‍ನಾಡ್ ಬಂಟ್ಸ್ ವಿನರ್ಸ್ ಹಾಗೂ ನಾಪೋಕ್ಲು ಆರ್.ಕೆ. ಬ್ರದರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ಭಾಜನವಾದವು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ವಿನರ್ಸ್ ಹಾಗೂ ಹಾಕತ್ತೂರು ರೈ ವಾರಿಯರ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದು ಕೊಂಡವು. ಕ್ರಿಕೆಟ್ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡದ
(ಮೊದಲ ಪುಟದಿಂದ) ಜಗದೀಶ್ ರೈ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಸಂಗೀತ ಕುರ್ಚಿ, ನಿಂಬೆ ಹಣ್ಣು ಚಮಚ ಓಟ, ಭಾರದ ಗುಂಡು ಎಸೆತ, ಕಪ್ಪೆ ಓಟ, ಕಾಳು ಹೆಕ್ಕುವದು, ವಯಸ್ಕರ ಓಟ, ಪುಟಾಣಿ ಮಕ್ಕಳ ಓಟದ ಸ್ಫರ್ಧೆಗಳು ನಡೆಯಿತು. ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ಸಾಧಕರಿಗೆ ಸನ್ಮಾನ : ಸಮಾರೋಪ ಸಮಾರಂಭದಲ್ಲಿ ಸಿದ್ದಾಪುರ ದೇವಿ ನರ್ಸರಿ ಬಿ.ಎಸ್. ವೆಂಕಪ್ಪ ರೈ, ವೀರಾಜಪೇಟೆ ಗಾಂಧಿನಗರ ರಾಮಣ್ಣ ಶೆಟ್ಟಿ, ಗೋಣಿಕೊಪ್ಪ ಆರ್. ಬಾಲಕೃಷ್ಣ ರೈ, ಮೂರ್ನಾಡು ಕರಿಯಪ್ಪ ರೈ, ಪೊಲೀಸ್ ಇಲಾಖೆಯ ಜಿತೇಂದ್ರ ರೈ, ವಿದ್ಯಾರ್ಥಿ ವಿಶಾಂತ್ ರೈ ಅವರುಗಳನ್ನು ಸಂಘದ ವತಿಯಿಂದ ಶಾಲು ಹೊದಿಸಿ ಫಲತಾಂಬೂಲದೊಂದಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮೂರ್ನಾಡು ಹೋಬಳಿ ಬಂಟರ ಸಂಘ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಕೊಡಗು ಜಿಲ್ಲಾ ಬಂಟರ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಹರ್ಷ ವ್ಯಕ್ತಪಡಿಸಿದರು. ಮೂರ್ನಾಡು ಹೋಬಳಿ ಬಂಟರ ಸಂಘದ ಸದಸ್ಯರ ಪರಿಶ್ರಮ ಹಾಗೂ ಒಗ್ಗಟ್ಟಿನಿಂದ ಕ್ರೀಡಾಕೂಟ ಯಶಸ್ವಿ ಕಂಡಿದೆ. ಪ್ರತಿಯೊಂದು ಹೋಬಳಿ ಸಂಘದವರು ಕೂಡ ಪರಿಶ್ರಮ ಪಟ್ಟರೆ ಸಂಘದ ಅಭಿವೃದ್ಧಿ ಹೊಂದಿ ಜನಾಂಗ ಬಾಂಧವರ ಉದ್ದಾರ ಆಗುತ್ತದೆ. ಕ್ರೀಡಾಕೂಟ ಮುಂದಿನ ವರ್ಷವು ಕೂಡ ವಿಜೃಂಭಣೆಯಿಂದ ನಡೆಸುವಂತಾಗಬೇಕು. ಕ್ರೀಡಾಕೂಟವು ಸ್ವಜಾತಿ ಬಾಂಧವರನ್ನು ಒಂದೆಡೆ ಸೇರಿ ಒಗ್ಗಟ್ಟನ್ನು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ರತ್ನಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಮಡಿಕೇರಿ ತಾಲೂಕು ತುಳು ಒಕ್ಕೂಟ ಅಧ್ಯಕ್ಷ ಪ್ರಭು ರೈ, ಉದ್ಯಮಿ ಡಾ. ಜಯಂತಿ ಆರ್ ಶೆಟ್ಟಿ, ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಐ. ರಮೇಶ್ ರೈ, ವಿರಾಜಪೇಟೆ ತಾಲೂಕು ಬಂಟರ ಸಂಘ ಅಧ್ಯಕ್ಷ ದುಷ್ಯಂತ್ ರೈ, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ಗಿರೀಶ್ ರೈ, ಸೋಮವಾರಪೇಟೆ ಬಂಟರ ಸಂಘದ ಅಧ್ಯಕ್ಷ ಬಿ. ಕೃಷ್ಣಪ್ಪ ಶೆಟ್ಟಿ, ಜಿಲ್ಲಾ ಬಂಟರ ಸಂಘ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಜಿಲ್ಲಾ ಬಂಟರ ಸಂಘ ಗೌರವಾಧ್ಯಕ್ಷ ಕೆ.ಆರ್. ಬಾಲಕೃಷ್ಣ ರೈ, ಉದ್ಯಮಿ ರವೀಂದ್ರ ರೈ, ಕುಶಾಲನಗರ ಹೋಬಳಿ ಬಂಟರ ಸಂಘದ ಅಧ್ಯಕ್ಷ ಕೆ.ವಿಠಲ್ ರೈ, ಸೋಮವಾರಪೇಟೆ ಬಂಟರ ಸಂಘ ನಿರ್ದೇಶಕಿ ಅಶ್ವಿನಿ ರೈ, ಮೂರ್ನಾಡು ಹೋಬಳಿ ಬಂಟರ ಸಂಘದ ಮಹಿಳಾ ಅಧ್ಯಕ್ಷೆ ವಾಣಿ ಶಬರೀಶ್, ಮೂರ್ನಾಡು ಹೋಬಳಿ ಬಂಟರ ಸಂಘದ ಸದಸ್ಯರು ಹಾಜರಿದ್ದರು.