ಕುಶಾಲನಗರ, ಮೇ 24: ಕಾವೇರಿ ನಿಸರ್ಗಧಾಮದ ಒಳಭಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಯಾವದೇ ರೀತಿಯ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಕಾವೇರಿ ನಿಸರ್ಗಧಾಮದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಕಳೆದ 26 ವರ್ಷಗಳಿಂದ ದೇಶ-ವಿದೇಶಗಳ ಪ್ರವಾಸಿಗರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳೊಂದಿಗೆ ಅತಿಥಿಗೃಹ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದೀಗ ಆ ಕಟ್ಟಡಗಳ ದುರಸ್ತಿ ಕಾರ್ಯದೊಂದಿಗೆ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವದೇ ರೀತಿಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿಲ್ಲ. ಇಲ್ಲಿನ ಎಲ್ಲಾ ಆದಾಯ ಸರಕಾರಕ್ಕೆ ಸಂದಾಯವಾಗುತ್ತಿದೆ ಹೊರತು ಈ ಪ್ರವಾಸಿ ಕೇಂದ್ರ ಲಾಭಕ್ಕಾಗಲಿ, ವಾಣಿಜ್ಯ ಉದ್ದೇಶಗಳಿಗೆ ಬಳಸುವ ಉದ್ದೇಶ ಹೊಂದಿಲ್ಲ ಎಂದರು. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಸರಕಾರಿ ನಿಯಮಾನುಸಾರ ಕಾಮಗಾರಿ ನಡೆಯುತ್ತಿದೆ. ಪ್ರಸಕ್ತ ಅನುದಾನದ ಕೊರತೆಯಿಂದ ಕೆಲಸ ಸ್ಥಗಿತಗೊಂಡಿದೆ ಎಂದರು.
ಪ್ರವಾಸಿಗರ ದಟ್ಟಣೆಯಿಂದ ದಿನದಿಂದ ದಿನಕ್ಕೆ ಅರಣ್ಯ ವಾತಾವರಣ ಅನೈರ್ಮಲ್ಯಗೊಳ್ಳುತ್ತಿದ್ದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಯ ಬಿದ್ದಲ್ಲಿ ನಿಸರ್ಗಧಾಮ ಹಾಗೂ ದುಬಾರೆ ಪ್ರವಾಸಿಧಾಮ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಮೂಲಕ ಸ್ಥಗಿತಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ತಿಳಿಸಿದರು.