ಕುಶಾಲನಗರ, ಮೇ 24: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಪರಿಶೀಲನೆ ಹಾಗೂ ಧನ್ಯವಾದ ಸಮರ್ಪಣೆ ಕಾರ್ಯಕ್ರಮ ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.

ಸಮ್ಮೇಳನದ ಗೌರವಾಧ್ಯಕ್ಷ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ ಲೆಕ್ಕಪತ್ರ ಮಂಡಿಸಿದರು. ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ಅವರು ಸಮ್ಮೇಳನಕ್ಕಾಗಿ ಸಾರ್ವಜನಿಕರಿಂದ ಸಂಗ್ರಹವಾದ ಒಟ್ಟು ರೂ. 18 ಲಕ್ಷದಲ್ಲಿ ರೂ 5.50 ಲಕ್ಷ ಉಳಿತಾಯವಾಗಿರುವ ಬಗ್ಗೆ ವಿವರ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಗಳಾಡಿದರು. ಉಳಿತಾಯದ ಹಣವನ್ನು ಸಾರ್ವಜನಿಕ ಕಾರ್ಯಕ್ಕೆ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಇದೇ ಸಂದರ್ಭ ರೂ 5.50 ಲಕ್ಷವನ್ನು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಪೂರ್ಣವಾಗಿರುವ ಗ್ಯಾಲರಿ ಕಾಮಗಾರಿ ನಿರ್ಮಾಣಕ್ಕೆ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.