ಮಡಿಕೇರಿ, ಮೇ 24: ತಂಬಾಕು ಉತ್ಪನ್ನಗಳ ನಿಯಮಬಾಹಿರ ಮಾರಾಟ, ಸೇವನೆ, ಉದ್ಪಾದನೆ ಹಾಗೂ ಅಂತಹ ಚಟುವಟಿಕೆಗೆ ಅವಕಾಶ ನೀಡುವದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, 2003ರ ಕೋಟ್ಪಾ (ಅoಣಠಿಚಿ) ಕೇಂದ್ರ ಸರಕಾರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಇದಾಗಿದೆ. ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ಹಂತದಿಂದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿವರೆಗಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಸಂಬಂಧಪಟ್ಟವರು ತಂಬಾಕು ಕಾಯ್ದೆ-2003ರ ಅನ್ವಯ ಎಚ್ಚರಿಕೆ ಫಲಕಗಳನ್ನು ಅಳವಡಿಸಲು (ನೇತು ಹಾಕಲು) ಸೂಚಿಸಲಾಗಿದೆ.

ಕನಿಷ್ಟ ಮಾಹಿತಿ: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ಗೂಡಂಗಡಿಗಳ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷಿದ್ಧ. ಆದರೆ ಜಿಲ್ಲೆಯಾದ್ಯಂತ ಎಲ್ಲ ಅಂಗಡಿಗಳು, ಬೇಕರಿಗಳು ಮನರಂಜನೆ ಕೇಂದ್ರಗಳ ಆವರಣದಲ್ಲಿಯೂ ಸೇದಬಾರದು. ಆದರೆ ಹೊಟೇಲ್, ಬಾರ್, ರೆಸ್ಟೋರೆಂಟ್‍ಗಳು, ಪಬ್, ಕಾಫಿ ಹೌಸ್‍ಗಳಲ್ಲಿ ನಿಷೇಧವಿದೆ. ಆದರೆ, ಇಂತಹ ಸ್ಥಳಗಳಲ್ಲಿ ವಿಶೇಷವಾಗಿ ತಂಬಾಕು ಸೇವನೆಗೆ ಪ್ರತ್ಯೇಕ ಸ್ಥಳವನ್ನು ಗುರುತಿಸಿದ್ದರೆ ಅಂತಹ ಸ್ಥಳಗಳಲ್ಲಿ ಮಾತ್ರ ಸೇದಬಹುದು. ಸಿನಿಮಾ ಹಾಲ್‍ಗಳು, ಡಿಸ್ಕೋಥೆಕ್‍ಗಳು, ಬಸ್ ನಿಲ್ದಾಣಗಳು, ಗ್ರಂಥಾಲಯಗಳಲ್ಲಿ ಕಡ್ಡಾಯ ತಂಬಾಕು ಉತ್ಪನ್ನ ಸೇವನೆಯ ನಿಯಂತ್ರಣದ ಪ್ರದೇಶಗಳಾಗಿವೆ.

ಅಲ್ಲದೆ ಕಲ್ಯಾಣ ಮಂಟಪದಂತಹ ಸಾರ್ವಜನಿಕ ಸಭಾಂಗಣಗಳು, ಆಸ್ಪತ್ರೆ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಕಚೇರಿಗಳು, ನ್ಯಾಯಾಲಯ ಕಟ್ಟಡ ಸಂಕೀರ್ಣಗಳು, ಶೈಕ್ಷಣಿಕ ಸಂಸ್ಥೆಗಳು (ಶಾಲಾ, ಕಾಲೇಜು ಸುತ್ತಮುತ್ತ) ಗ್ರಂಥಾಲಯಗಳು, ಸಮುದಾಯ ಕೇಂದ್ರಗಳು, ಬಯಲು ಮಂದಿರಗಳು ಅಥವಾ ತೆರೆದ ಸಭಾಂಗಣಗಳು, ಕ್ರೀಡಾಂಗಣ (ಆಟದ ಮೈದಾನ), ರೈಲ್ವೇ ನಿಲ್ದಾಣಗಳು ಕೋಟ್ಪಾ ಕಾಯ್ದೆಯಡಿ ಬರಲಿವೆ. ಶೈಕ್ಷಣಿಕ ಕೇಂದ್ರಗಳು, ಕಂಪ್ಯೂಟರ್ ಮತ್ತಿತರ ತರಬೇತಿ ಕೇಂದ್ರಗಳ ಬಳಿ 100 ಗಜ ಅಂತರದ ಒಳಗಿನ ಅಂಗಡಿ ಮತ್ತು ಮಾರಾಟ ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟಗೊಳಿಸು ವಂತಿಲ್ಲ. ಮಾತ್ರವಲ್ಲ ತಂಬಾಕು ಬಳಕೆಗೆ ಬೇಕಾದ ಬೆಂಕಿ ಪೊಟ್ಟಣ, ಆ್ಯಸ್ಟ್ರೇ ಅಥವಾ ಸಿಗರ್‍ಲೈಟರ್‍ಗಳನ್ನು ಮಾರಾಟಗೊಳಿಸುವಂತಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಎಂ. ಶಿವಕುಮಾರ್ ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ.

ಇನ್ನು ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಮಹಾನಗರಿಗಳ ಶಾಪಿಂಗ್ ಮಾಲ್‍ಗಳಿಂದ ಮೊದಲ್ಗೊಂಡು ಹಳ್ಳಿಗಾಡಿನ ಚಿಲ್ಲರೆ ಅಂಗಡಿಗಳಲ್ಲಿ ಕೂಡ ಶಾಸನ ವಿಧಿಸಿದ ಕಾನೂನುಗಳಿಗೆ ನಿಗಾವಿಡುವಂತೆ ಸೂಚಿಸಲಾಗಿದೆ.

ಕೋಟ್ಪಾ-2003 ಏನು ಹೇಳುತ್ತದೆ

ತಂಬಾಕು ಉತ್ಪನ್ನಗಳ ಸೇವನೆ ನಿಷೇಧಿಸುವ ಕಾನೂನನ್ನು ಜಾರಿಗೆ ತರುವದು ಸಾರ್ವಜನಿಕ ಸ್ಥಳಗಳ ಮೇಲುಸ್ತುವಾರಿ ಹೊಂದಿರುವ ಕಟ್ಟಡ ಮಾಲೀಕರು, ವ್ಯವಸ್ಥಾಪಕರು, ಸೂಪರ್‍ವೈಸರ್‍ಗಳ ಕರ್ತವ್ಯವಾಗಿದೆ.

ತಮ್ಮ ವ್ಯಾಪ್ತಿಯ ಎಲ್ಲ ಕಟ್ಟಡ, ಪರಿಸರದಲ್ಲಿ ಸಂಪೂರ್ಣ ತಂಬಾಕು ಸೇವನೆಯಿಂದ ನಿರ್ಬಂಧಿಸತಕ್ಕದ್ದು. ಆ ದಿಸೆಯಲ್ಲಿ ಎಷ್ಟು ಬಾಗಿಲುಗಳು ಇರುತ್ತವೆಯೋ ಅಂತಹ ಕಡೆಗಳಲ್ಲಿ, ಮಹಡಿ ಮೆಟ್ಟಿಲು, ಲಿಫ್ಟ್‍ಗಳ ಪ್ರವೇಶದಲ್ಲಿ ಸೂಚನಾ ಫಲಕ ಅಳವಡಿಸಬೇಕು. ಕಾನೂನು ಉಲ್ಲಂಘಿಸಿ ಧೂಮಪಾನ ಅಥವಾ ತಂಬಾಕು ಸೇವನೆ ಮಾಡುವವರನ್ನು ಹಿಡಿದುಕೊಡಲು, ಕ್ರಮ ಜರುಗಿಸಲು ಸಮೀಪದ ಪೊಲೀಸ್ ಠಾಣೆ ಅಥವಾ ಸಂಬಂಧಿಸಿದ ಕಚೇರಿ, ಅಧಿಕಾರಿಗಳ ದೂರವಾಣಿ ಸಂಖ್ಯೆ ಅಳವಡಿಸುವದು ಫಲಕದಲ್ಲಿ ಕಡ್ಡಾಯವಾಗಿರುತ್ತದೆ.

ಕ್ರಮ ಜರುಗಿಸುವ ಹಕ್ಕು

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರನ್ನು ದಂಡಿಸಲು ಪೊಲೀಸ್ ಉಪ ನಿರೀಕ್ಷಕರಿಂದ ಮೊದಲ್ಗೊಂಡು ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಸಹಿತ ಒಟ್ಟು 11 ಇಲಾಖೆಗಳ ಅಧಿಕಾರಿಗಳು ಅಧಿಕಾರ ಹೊಂದಿದ್ದಾರೆ.

ವಿಶ್ವವಿದ್ಯಾಲಯಗಳ ಹಂತದ ತನಕ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕರು, ಆರೋಗ್ಯ ಇಲಾಖೆ, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಮುಖರು, ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳು ಹಾಗೂ ಮೇಲ್ಪಟ್ಟವರು ನಗರ ಅಥವಾ ಪುರಸಭೆಗಳ ಆರೋಗ್ಯ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಗಳ ಸಂಬಂಧಪಟ್ಟ ಪ್ರಮುಖರು, ವಿವಿಧ ಇಲಾಖೆಗಳ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ನೋಡಲ್ ಅಧಿಕಾರಿಗಳು ಕ್ರಮ ಜರುಗಿಸುವ ಎಲ್ಲ ಹಕ್ಕು ಹೊಂದಿರುತ್ತಾರೆ.

ಕನಿಷ್ಟ ದಂಡ: ಶಾಲಾ-ಕಾಲೇಜು ಪರಿಸರದಲ್ಲಿ 100 ಗಜ ಹಾಗೂ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬಂದರೆ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಪದೇ ಪದೇ ಕಾನೂನು ಉಲ್ಲಂಘಿಸಿದರೆ ಬಂಧಿಸಬಹುದು. ಮೊದಲ ತಪ್ಪಿಗೆ ಸೇವನೆ ಮಾಡುವವರಿಗೆ ರೂ. 200 ದಂಡ ಹಾಗೂ ಎಚ್ಚರಿಕೆ ನೀಡಬಹುದು.

ಸ್ಥಳದಂಡ ವಸೂಲಿ ಸಾಧ್ಯವಾಗದಿದ್ದರೆ ದಂಡ ವಿಧಿಸುವ ರಶೀತಿ ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಧೀಶರು ವಿಧಿಸುವ ಶಿಕ್ಷೆಗೆ ಗುರಿಪಡಿಸಬಹುದು. ಕೋಟ್ಪಾ ಕಾಯ್ದೆಯಡಿ ಸೆ. 24ರ ಅನ್ವಯ ಪೊಲೀಸ್ ಪುಕಾರು ದಾಖಲಿಸಬಹುದು.

2003ರಲ್ಲಿಯೇ ಭಾರತ ಸರಕಾರ ಕೋಟ್ಪಾ ಕಾಯ್ದೆ ಅನುಷ್ಠಾನಗೊಳಿಸಿದ್ದರೂ, ಇದುವರೆಗೆ ಪರಿಣಾಮಕಾರಿ ಜಾರಿಯಾಗದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ದೊಂದಿಗೆ ಕಠಿಣ ಕ್ರಮಕ್ಕೆ ಕೇಂದ್ರ ಸರಕಾರ ನಿರ್ದೇಶಿಸಿದ್ದು, ಇದನ್ನು ಆಯಾ ರಾಜ್ಯಗಳು ಜಾರಿಗೊಳಿಸಲು ಕೇಂದ್ರ ಕಟ್ಟಪ್ಪಣೆ ಮಾಡಿರುವದರಿಂದ ಈ ರೀತಿಯ ಕಾನೂನು ಸರಣಿ ಜಾರಿಗೊಳ್ಳುತ್ತಿದೆ.

ಉತ್ಪನ್ನವೆಸಗಿದ ಆಪತ್ತು!

ವಿಶ್ವದ ಅಂಕಿ ಅಂಶ ಹೇಳುವಂತೆ ತಂಬಾಕು ಉತ್ಪನ್ನ ಸೇವನೆಯಿಂದ ಪ್ರತಿವರ್ಷ 60 ಲಕ್ಷ ಜನ ಕ್ಯಾನ್ಸರ್‍ನಂತಹ ಕಾಯಿಲೆಗೆ ಸಿಲುಕಿ ಸಾಯುತ್ತಿದ್ದಾರೆ. ಭಾರತದಲ್ಲಿ ಶೇ. 14.6 ರಷ್ಟು ಯುವ ಜನಾಂಗ ಒಂದಿಲ್ಲೊಂದು ರೀತಿ ಈ ದುಶ್ಚಟಕ್ಕೆ ಒಳಗಾಗಿದ್ದಾರೆ. ಇಲ್ಲಿ ಶೇ. 19 ಹುಡುಗರಿದ್ದರೆ, ಶೇ. 8.3 ರಷ್ಟು ಹುಡುಗಿಯರು ತಂಬಾಕು ಉತ್ಪನ್ನ ಸೇವಿಸುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಮನೆಗಳಲ್ಲಿ ಧೂಮಪಾನ ಮಾಡುವ ಪರಿಣಾಮ ದೇಶದ ಶೆ. 219 ರಷ್ಟು ಯುವಕ-ಯುವತಿಯರು ಪರೋಕ್ಷ ಈ ಚಟಕ್ಕೆ ಸಿಲುಕಿದ್ದಾರೆ.

ಕರ್ನಾಟಕದಲ್ಲಿ ಶೇ. 30.13 ರಷ್ಟು ಮಂದಿ ತಂಬಾಕು ಉತ್ಪನ್ನ ಸೇವಿಸುತ್ತಿದ್ದು, ಶೇ. 19.4 ರಷ್ಟು ಹೊಗೆಸೊಪ್ಪು ಇತ್ಯಾದಿ ತಿನ್ನುವವರಿದ್ದರೆ, ಶೇ. 11.9 ರಷ್ಟು ಮಂದಿ ಧೂಮಪಾನ ಮಾಡುತ್ತಿದ್ದಾರೆ.