ಮಡಿಕೇರಿ, ಮೇ 24: ರಾಜ್ಯದಾದ್ಯಂತಲಿನ ಕಾಡು ಹಣ್ಣುಗಳು, ಅಪರೂಪದ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ನಶಿಸಿ ಹೋಗುತ್ತಿರುವ ಸಸ್ಯಗಳ ಸಂಗ್ರಹದೊಂದಿಗೆ ದಾಖಲೀಕರಣ ಕೈಗೊಳ್ಳುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ನಡೆದ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಪ್ರದರ್ಶನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ದಿನೇಶ್, ಅಪ್ಪೆಮಿಡಿಯಂಥ ಉಪ್ಪಿನಕಾಯಿಗೆ ಬಳಕೆಯಾಗುವ ಮಾವಿನ ಮಿಡಿಯ ಸಸಿಯನ್ನು ಉತ್ತರ ಕರ್ನಾಟಕದ ನದಿ ತೀರದ ದೊಡ್ಡ ಮರಗಳಿಂದ ಸಂಗ್ರಹಿಸಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇಂಥ ಸಸಿಗಳನ್ನು ಪೆÇೀಷಿಸಿ ಸಸಿಗಳನ್ನು ವೃದ್ಧಿಗೊಳಿಸುವ ಕಾರ್ಯ ಜಾರಿಯಲ್ಲಿದೆ.
ಇದೇ ರೀತಿ ಕರ್ನಾಟಕದ ಅನೇಕ ಅಪರೂಪದ ಸಸ್ಯಗಳು, ತೋಟಗಾರಿಕಾ ಬೆಳೆಗಳು, ಔಷಧೀಯ ಸಸ್ಯಗಳು, ತರಕಾರಿ, ಕಾಡು ಹಣ್ಣುಗಳನ್ನು ವಿನಾಶದಂಚಿನಿಂದ ರಕ್ಷಿಸಿ ಮುಂದಿನ ಪೀಳಿಗೆಗೆ ರಕ್ಷಿಸುವ ಕಾರ್ಯಯೋಜನೆ ಜಾರಿಯಲ್ಲಿದೆ. ಇಂಥವುಗಳು ಇರುವ ಸ್ಥಳಕ್ಕೆ ತಜ್ಞರ ತಂಡ ತೆರಳಿ ಪ್ರತೀ ಗಿಡದ ಮಾಹಿತಿಯೊಂದಿಗೆ ಅಂಥ ಗಿಡಗಳನ್ನು ಸಂಗ್ರಹಿಸಿ ದಾಖಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾಡಿನಲ್ಲಿ ದೊರಕುವ ಹಣ್ಣುಗಳಲ್ಲಿ ಉತ್ತಮ ಆರೋಗ್ಯದಾಯಕ ಗುಣಗಳಿರುತ್ತದೆ. ಆದರೆ ಇಂಥ ಹಣ್ಣುಗಳನ್ನು ವ್ಯಾಪಾರಿ ಉದ್ದೇಶಕ್ಕೆ ಬೆಳೆಸಲು ಅಸಾಧ್ಯವಾದ ಆರ್ಥಿಕ ಪರಿಸ್ಥಿತಿಯಿದೆ.
ಈ ನಿಟ್ಟಿನಲ್ಲಿ ಅಪರೂಪದ ನಾಡು ಹಣ್ಣುಗಳನ್ನು ಗುರುತಿಸಿ ನಾಡು ಹಾಗೂ ವಾಣಿಜ್ಯ ತಳಿಗಳ ಹೈಬ್ರೀಡ್ ಮಿಶ್ರಣದ ತಳಿಯನ್ನು ಕೂಡ ಸಂಶೋಧಿಸಲಾಗಿದೆ. ಇದರಿಂದಾಗಿ ಅನೇಕ ನಾಡು ಹಣ್ಣುಗಳಿಗೆ ಕಾಯಕಲ್ಪ ದೊರಕಿದಂತಾಗುತ್ತದೆ ಎಂದು ಡಾ. ದಿನೇಶ್ ಹೇಳಿದರು.
ಮೌಲ್ಯಾಧಾರಿತ ತೋಟಗಾರಿಕಾ ಉತ್ಪನ್ನಗಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಆದ್ಯತೆ ನೀಡುತ್ತಿದ್ದು, ಹೀಗಾಗಿ ಪ್ರತಿಯೋರ್ವ ಕೃಷಿಕ ಬೆಳೆಸಿದ ಕೃಷಿ, ತೋಟಗಾರಿಕಾ ಫಸಲಿಗೆ ಯೋಗ್ಯ ಮಾರುಕಟ್ಟೆ ದೊರಕುವದು ಸಂಸ್ಥೆಯ ಗುರಿಯಾಗಿದೆ.
ಪಪ್ಪಾಯಿ, ಸೀಬೆ, ಮಾವು, ಹಲಸು, ಅಣಬೆ ಹೀಗೆ ಅನೇಕ ತೋಟಗಾರಿಕಾ ಬೆಳೆಗಳ ಮಾರುಕಟ್ಟೆಯನ್ನು ಯಾವ ರೀತಿಯಲ್ಲಿ ವೃದ್ಧಿಸಬಹುದು ಎಂಬ ಬಗ್ಗೆಯೂ ಯೋಜನೆ ಜಾರಿಯಲ್ಲಿದೆ ಎಂದು ಡಾ. ದಿನೇಶ್ ಹೇಳಿದರು.
ನೈಸರ್ಗಿಕ ಫಲಗಳ ಸಂರಕ್ಷಣೆ ಇಂದಿನ ಅನಿವಾರ್ಯತೆಯಾಗಿದ್ದು, ಹೀಗಾಗಿಯೇ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತೋಟಗಾರಿಕಾ ಬೆಳೆಗಳ ಬಗ್ಗೆ ಹೆಚ್ಚಿನ ಕಾಳಜಿಯ ಪ್ರಯೋಗ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಕೊಡಗಿಗೆ ಅರ್ಕಾ ಜೀವಾಣು ಗೊಬ್ಬರ ಅತ್ಯಂತ ಸೂಕ್ತವಾಗಿದ್ದು, ಈಗಾಗಲೇ ಕಾಳುಮೆಣಸು ಬಳ್ಳಿಗಳಿಗೆ ತಗಲಿರುವ ಸೊರಗು ರೋಗ ನಿವಾರಣೆ ನಿಟ್ಟಿನಲ್ಲಿ ಸಂಸ್ಥೆಯ ಅರ್ಕಾ ಜೀವಾಣು ಗೊಬ್ಬರ ಪರಿಣಾಮಕಾರಿಯಾಗಿದೆ.
ಅರ್ಕಾ ಜೀವಾಣು ಸಿಂಪಡಿಸಿದ ಪರಿಣಾಮ ಸಾಯುತ್ತಿದ್ದ ಕರಿಮೆಣಸು ಬಳ್ಳಿಗಳೂ ಮತ್ತೆ ಚಿಗುರುವಂತಾಗಿದೆ. ಕಾಫಿ ಕೃಷಿಗೂ ಈ ಗೊಬ್ಬರ ವರದಾನವಾಗಲಿದೆ ಎಂದು ಡಾ. ಭರವಸೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಮುಖ್ಯ ಬೆಳೆಗಳಲ್ಲೊಂದಾಗಿದ್ದ ಕಿತ್ತಳೆ ರೋಗದಿಂದಾಗಿ ಕೆಲ ವರ್ಷಗಳ ಹಿಂದೆ ಅವನತಿಗೆ ತಲಪಿತ್ತು. ಆದರೀಗ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಯತ್ನವಾಗಿ ರೋಗ ರಹಿತ ಕಿತ್ತಳೆ ಸಸಿಗಳು ಬೆಳೆಗಾರರಲ್ಲಿ ಮತ್ತೆ ಕಿತ್ತಳೆ ಕೃಷಿಯ ಬಗ್ಗೆ ಆಶಾಭಾವನೆಗೆ ಕಾರಣವಾಗಿದೆ ಎಂದು ಡಾ. ದಿನೇಶ್ ಹೇಳಿದರು.
ಭಾರತದಲ್ಲಿ ಹಣ್ಣು ತಿನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿಯೇ ಕೃಷಿ ಉತ್ಪನ್ನಗಳಿಗಿಂತ ಭಾರತದಲ್ಲಿ ತೋಟಗಾರಿಕಾ ಉತ್ಪನ್ನಗಳ ಪ್ರಮಾಣ ದುಪ್ಪಟ್ಟಾಗಿದೆ. ಮೊದಲು ದೇಶದಲ್ಲಿ 170 ಮಿಲಿಯನ್ ಟನ್ ಇದ್ದ ತೋಟಗಾರಿಕಾ ಉತ್ಪನ್ನ ಪ್ರಮಾಣ ಇದೀಗ 284 ಮಿಲಿಯನ್ ಟನ್‍ಗೆ ಗಣನೀಯ ಹೆಚ್ಚಳವಾಗಿದೆ.
ಕೃಷಿಕ ಮತ್ತು ಖರೀದಿದಾರರು, ಕೃಷಿ, ತೋಟಗಾರಿಕಾ ಸಂಸ್ಕರಣಾ ಉದ್ಯಮಿಗಳ ನಡುವೆ ಉತ್ತಮ ವ್ಯಾಪಾರಿ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಕೊಡಗಿನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸುವದಾಗಿಯೂ ನಾಪೆÇೀಕ್ಲು ಮೂಲದ ಮಕ್ಕಿ ದಿನೇಶ್ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದರು.
- ಡಾ. ಎಂ.ಆರ್. ದಿನೇಶ್