ನ್ಯಾಯಾಧೀಶ ಮೋಹನ್ ಪ್ರಭು ವಿಷಾದ ವೀರಾಜಪೇಟೆ, ಮೇ 23: ಇಂದು ನಾವು ಅಭಿವೃದ್ಧಿ ಪಥದಲ್ಲಿ ಬಿರುಸಿನಿಂದ ಸಾಗಿದರೂ ವೃದ್ಧ ತಂದೆ ತಾಯಂದಿರನ್ನು ನೋಡಿಕೊಳ್ಳದೆ ಉದಾಸೀನ ಮಾಡುವದು ನೋವಿನ ವಿಚಾರ. ಇದಕ್ಕಾಗಿ ಕಾನೂನು ಇದ್ದರೂ ಇಲ್ಲಿ ಮನಸ್ಸಿನ ಬದಲಾವಣೆ ಮುಖ್ಯ ಎಂದು ಮಡಿಕೇರಿ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮೋಹನ್ ಪ್ರಭು ಹೇಳಿದರು.

ವೀರಾಜಪೇಟೆ ಪುರಭವನದಲ್ಲಿ ವಿಕಲಚೇತನರು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ “ಕಾನೂನು ಅರಿವು ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಬದ್ಧವಾಗಿ ಶುದ್ಧ ಆಹಾರ, ಶುದ್ಧ ನೀರು, ಗಾಳಿ ಪಡೆದು ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಇದರಿಂದ ಯಾರು ವಂಚಿತರಾಗ ಬಾರದು, ಗೌರವಯುತವಾಗಿ ಬದುಕಬೇಕು. ಅದೇ ರೀತಿ ಮಕ್ಕಳು ಹಿರಿಯರನ್ನು ಗೌರವಿಸಬೇಕು. ವೃದ್ದಾಪ್ಯದಲ್ಲಿ ಅವರನ್ನು ಪ್ರೀತಿಯಿಂದ ಕಾಣಬೇಕು. ಎಂದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿ, ನಕಲಿ ವೈದ್ಯರು ನೀಡುವ ಚಿಕಿತ್ಸೆಯಿಂದ ಅಂಗವಿಕಲತೆ ಬರುತ್ತಿದೆ. ಜೊತೆಗೆ ವೈದ್ಯರ ಸಲಹೆ ಇಲ್ಲದೆ ತೆಗೆದು ಕೊಳ್ಳುವ ಕೆಲವು ಔಷಧಿಗಳಿಂದಲೂ ಅಂಗವಿಕಲತೆಗೆ ಕಾರಣವಾಗುತ್ತಿದೆ. ಕೆಲವು ಔಷಧಿಗಳ ಅಡ್ಡ ಪರಿಣಾಮದಿಂದ ಹುಟ್ಟುವ ಮಗುವಿಗೂ ಅಂಗವಿಕಲತೆ ಉಂಟಾಗುವ ಸಾಧ್ಯತೆ ಇದೆ. ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿ. ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಹಿರಿಯ ನಾಗರಿಕರು ಹಾಗೂ ಅವರ ಮಕ್ಕಳಿಗೆ ಕಾನೂನು ಅರಿವು ಮೂಡಿಸಬೇಕು. ಅವರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಅತಿಥಿಗಳಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾ.ಪಂ. ಉಪಾಧ್ಯಕ್ಷ ವಸಂತ ಕಟ್ಟಿ, ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಮಡಿಕೇರಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ಮಹಾದೇವಸ್ವಾಮಿ, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪ್ರಭುಸ್ವಾಮಿ ಮಾತನಾಡಿದರು. ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.