ಕೂಡಿಗೆ, ಮೇ 24: ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ತೆರೆಯುವ ಯೋಜನೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಜಾರಿಗೊಂಡಿದೆಯಾದರೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇನ್ನೂ ಯೋಜನೆ ಬಾಕಿಯಿದ್ದು, ಅದರಲ್ಲಿ ಕೊಡಗು ಜಿಲ್ಲೆಯೂ ಸೇರಿದೆ.ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದ ವಿಮಾನ ಯಾನದ ಕಮಾಂಡರ್‍ಗಳ ತಂಡ ಕಳೆದ ವರ್ಷ ಎರಡು-ಮೂರು ಬಾರಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 120 ಎಕರೆ ಸರಕಾರಿ ಜಾಗವನ್ನು ಪರಿಶೀಲಿಸಿತ್ತು. ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಅಳುವಾರದಲ್ಲಿ ಖಾಲಿ ಇರುವ ಜಾಗವನ್ನು ಕಮಾಂಡರ್ ತಂಡವು ಹವಾಮಾನ ಮತ್ತು ಇನ್ನಿತರ ಯೋಜನೆಯ ತಂಡಗಳು ಪರಿಶೀಲನೆ ನಡೆಸಿ ತೆರಳಿದೆ. ಆದರೆ ಇದುವರೆಗೂ ಮೇಲ್ಮಟ್ಟದಿಂದ ಜಿಲ್ಲಾಡಳಿತಕ್ಕೆ ಸಂದೇಶಗಳು ಬಂದಿಲ್ಲ. ಈ ಸಾಲಿನಲ್ಲಿ ಕೊಡಗು ಜಿಲ್ಲೆಯ ಕೂಡಿಗೆಯ ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ತೆರೆಯುವದಾಗಿ ಭರವಸೆ ನೀಡಿ ತೆರಳಿದ್ದ ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಹಾಗೂ ವಿಮಾನಯಾನ ಇಲಾಖೆಯ ರಾಜ್ಯ ಮತ್ತು ರಾಷ್ಟ್ರಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಹವಾಮಾನದ ವರದಿಯನ್ನು, ಕಡತಗಳನ್ನು ಪರಿಶೀಲನೆಗಾಗಿ ಕೊಂಡೊಯ್ದಿದ್ದರು. ಇದುವರೆಗೂ ಯಾವದೇ ರೀತಿಯ ಸ್ಪಂದನ ಇಲ್ಲದಂತಾಗಿದೆ. ಕೊಡಗು ಜಿಲ್ಲೆಯು ಕಾಫಿ ಉದ್ಯಮದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ರಫ್ತು-ಆಮದುಗಳ ಬೆಳವಣಿಗೆಗೆ ಪೂರಕವಾಗುವಂತೆ ಜಿಲ್ಲೆಯಲ್ಲಿ ವಿಮಾನಯಾನದ ಅವಶ್ಯಕತೆ ಉದ್ಯಮಗಳಿಗೆ ಹಾಗೂ ಇನ್ನಿತರ ಸಾರ್ವಜನಿಕರಿಗೆ ಮುಖ್ಯವಾಗಿದೆ. ವಿಮಾನ ನಿಲ್ದಾಣ ತೆರೆಯುವದಾಗಿ ಕಳೆದ ಐದು ವರ್ಷಗಳಿಂದಲೂ ಆಸೆ ಮೂಡಿಸಿ ಇದೀಗ ಭರವಸೆಯಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರಯತ್ನಿಸಿದ್ದರು. ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರಬಾಬು ಕಡತಗಳ ಪೂರೈಕೆಯಲ್ಲಿ ಅಧಿಕಾರಿಗಳೊಂದಿಗೆ ಸ್ಪಂದಿಸಿದರೂ ಇದುವರೆಗೂ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಯಾವದೇ ಮಾಹಿತಿ ಇಲ್ಲವಾಗಿದೆ.

ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಅಂಶವಾಗಿರುವ ವಿಮಾನ ನಿಲ್ದಾಣದ ಯೋಜನೆಯು ಕಾರ್ಯಗತಗೊಳ್ಳಲು ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ