ಅರಣ್ಯ ಇಲಾಖೆಯ ಕಣ್ಗಾವಲು: ಜೂóನಲ್ಲಿ ಆಶ್ರಯ ಚೆಟ್ಟಳ್ಳಿ, ಮೇ 24: ಕಳೆದೆರಡು ತಿಂಗಳ ಹಿಂದೆ ಸುಂಠಿಕೊಪ್ಪ-ಕುಶಾಲನಗರ ರಸ್ತೆಯ ಅತ್ತೂರು-ಆನೆಕಾಡು ಮೀಸಲು ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸುಮಾರು 600 ಹೆಕ್ಟೇರ್ ಅರಣ್ಯ ಕರಕಲಾಯಿತು, ಅರಣ್ಯದೊಳಗಿನ ಕಾಡು ಮರ, ಬಳ್ಳಿಗಳು ಬೆಂಕಿಯಲ್ಲಿ ಹೊತ್ತಿ ಉರಿದರೆ ಪ್ರಾಣಿ-ಪಕ್ಷಿಗಳು, ಸರಿಸೃಪಗಳು, ಮೊಟ್ಟೆಗಳು ಬೆಂದವು. ಕಾಡಿನ ಬೆಂಕಿಯೊಳಗಿಂದ ತಾಯಿಯನ್ನು ಅಗಲಿದ ಅಪರೂಪದ ಪುಟ್ಟ ‘ಲಿಯೋಪರ್‍ಡ್ ಕ್ಯಾಟ್(ಚಿರತೆ ಬೆಕ್ಕಿನ ಮರಿ)ಒಂದು ಬದಿಯಲ್ಲಿ ಚೀರಾಡುತಿತ್ತು.

ಬೆಂಕಿಯಿಂದ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ ಸಿಬ್ಬಂದಿಗಳು ಪುಟ್ಟ ಚಿರತೆ ಬೆಕ್ಕಿನ ಮರಿಯನ್ನು ತಂದು ಕುಶಾಲನಗರದ ಗಂಧದ ಕೋಟೆಯ ಅರಣ್ಯ ಕಚೇರಿಯಲ್ಲಿಟ್ಟು ಪೋಷಿಸ ತೊಡಗಿದರು. ಪುಟ್ಟ ಮರಿ ಆಹಾರವಿಲ್ಲದೆ ನಿತ್ರಾಣದಲ್ಲಿದ್ದು ಮೊದಲ ದಿನ ಏನನ್ನೂ ತಿನ್ನದೆ ಮೂರು-ನಾಲ್ಕು ದಿನಗಳಲ್ಲಿ ಸ್ವಲ್ಪ ಹಾಲನ್ನು ಕುಡಿಯತೊಡಗಿತ್ತು. ಕೆಲವು ದಿನಗಳವರೆಗೆ ಬರಿ ಹಾಲನ್ನು ನೀಡುತ್ತಾ ಪಾಲನೆ ಮಾಡಿ ನಂತರದಲ್ಲಿ ಸಿಬ್ಬಂದಿಗಳು 10 ಗ್ರಾಂ ಮಾಂಸ ನೀಡುತ್ತಿದ್ದುದರಿಂದ ಉತ್ತಮ ರೀತಿಯಿಂದ ಬೆಳೆಯಿತು ಎಂದು ಅರಣ್ಯಾಧಿಕಾರಿಗಳಾದ ಕೊಚ್ಚೆರ ನೆಹರೂ ಹಾಗೂ ಕನ್ನಂಡ ರಂಜನ್ ಹೇಳುತ್ತಾರೆ.

ಮುಖ್ಯ ಅರಣ್ಯಾಧಿಕಾರಿ ಮನೋಜ್ ಕುಮಾರ್, ಉಪಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಅವರು ಮರಿಯನ್ನು ವೀಕ್ಷಿಸುತ್ತಾ ಪಾಲನೆ ಮಾಡಲು ಸಿಬ್ಬಂದಿಗಳಿಗೆ ಆದೇಶಿಸಿದ್ದರು.

ಕಳೆದೆರಡು ತಿಂಗಳಿನ ಹಿಂದೆ ವೈದ್ಯ ಡಾ. ಉಮಾಶಂಕರ್ ಅವರು ಮರಿಯ ಪಾಲನೆಯನ್ನು ಗಮನಿಸಿ ಮೈಸೂರಿನ ಮೃಗಾಲಯದಲ್ಲಿ ಅಪರೂಪದ ಲಿಯೋಪರ್‍ಡ್ ಕ್ಯಾಟ್ ಇಲ್ಲದ್ದರಿಂದ ರವಾನಿಸುವಂತೆ ತಿಳಿಸಿದ ಮೇರೆಗೆ ಮೈಸೂರು ಮೃಗಾಲಯದ ವಲಯಾಧಿಕಾರಿ ಮರಿಯನ್ನು ಇಲಾಖಾ ಆದೇಶದೊಂದಿಗೆ ಪಡೆದರು.

ಮೈಸೂರು ಮೃಗಾಲಯದಲ್ಲಿ ಕೊಡಗಿನ ಅಪರೂಪದ ಚಿರತೆ ಬೆಕ್ಕಿನ ಮರಿಯನ್ನು ಪೋಷಿಸುತ್ತಿರುವ ಬಗ್ಗೆ ಹಾಗೂ ಸಂತೋಷದಿಂದ ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅರಣ್ಯಕ್ಕೆ ಬೆಂಕಿ ಬಿದ್ದಾಗ ಕಾಡಿನೊಳಗಿಂದ ಬಂದ ಚಿರತೆ ಬೆಕ್ಕಿನ ಮರಿಯನ್ನು ಸಿಬ್ಬಂದಿಗಳು ತಂದು ಪೋಷಿಸಿ ಮೈಸೂರು ಮೃಗಾಲಯಕ್ಕೆ ಒಪ್ಪಿಸಲಾಗಿದೆ ಎಂದು ಮನೋಜ್ ಕುಮಾರ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಅಪರೂಪಕ್ಕೆ ಕಾಣಬರುವ ಕಾಡಿನಿಂದ ಬೇರ್ಪಟ್ಟ ಚಿರತೆ ಬೆಕ್ಕಿನ ಪುಟ್ಟ ಮರಿಯನ್ನು ಹಾಗೂ ಮೂರು ಕಾಡು ಬೆಕ್ಕಿನ ಮರಿಯನ್ನು ಕುಶಾಲನಗರ ಅರಣ್ಯ ಸಿಬ್ಬಂದಿಗಳು ಕಚೇರಿಯಲ್ಲೇ ಸಂರಕ್ಷಿಸುತ್ತಿದ್ದಾರೆ ಎಂದು ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ