ಮಡಿಕೇರಿ, ಮೇ 23: ಪ್ರಸಕ್ತ ಸಾಲಿಗೆ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಯೋಜನೆಯಡಿಯಲ್ಲಿ ಸದಸ್ಯರುಗಳ ನೋಂದಣಿ ಹಾಗೂ ನವೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಜೂನ್ 30 ರವರೆಗೆ ನಡೆಯಲಿದೆ. ಯಶಸ್ವಿನಿ ರೈತರ ಆರೋಗ್ಯ ರಕ್ಷಣಾ ಯೋಜನೆಯು ಸಹಕಾರ ಸಂಘಗಳ ಸದಸ್ಯರಿಗಾಗಿ ರಾಜ್ಯ ಸರ್ಕಾರದ ಪ್ರಯೋಜಿತ ಯೋಜನೆಯಾಗಿದೆ.ಯಾವದೇ ಗ್ರಾಮೀಣ-ನಗರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಮೂರು ತಿಂಗಳು ಪೂರ್ಣಗೊಂಡಿರುವ ಸಹಕಾರ ಸಂಘಗಳ ಸದಸ್ಯರು ಹಾಗೂ ಅವರ ಕುಟುಂಬದವರು ಆಧಾರ್ ಸಂಖ್ಯೆಯನ್ನು ನೀಡಿ ಸದಸ್ಯರಾಗಿರುವ ಸಹಕಾರ ಸಂಘದಿಂದ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಪ್ರತೀ ಸದಸ್ಯರು ಗ್ರಾಮೀಣ ಯಶಸ್ವಿನಿ ಯೋಜನೆಯಡಿಯಲ್ಲಿ ವಾರ್ಷಿಕ ವಂತಿಕೆ ತಲಾ ರೂ. 300 ಪಾವತಿಸಿ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಸದಸ್ಯರು ತಲಾ ರೂ. 50 ಪಾವತಿಸಿ ಸದಸ್ಯರಾಗಬಹುದಾಗಿದೆ.

ನಗರ ಯಶಸ್ವಿನಿ ಯೋಜನೆಯಡಿಯಲ್ಲಿ ವಾರ್ಷಿಕ ವಂತಿಕೆ ತಲಾ ರೂ. 710 ಪಾವತಿಸಿ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಸದಸ್ಯರು ತಲಾ ರೂ. 110 ಪಾವತಿಸಿ ಸದಸ್ಯರಾಗಬಹುದಾಗಿದೆ. ಒಂದೇ ಕುಟುಂಬದ 5 ಅಥವಾ ಹೆಚ್ಚು ಸದಸ್ಯರನ್ನು ನೋಂದಾಯಿಸಿದರೆ ವಂತಿಕೆಯಲ್ಲಿ ಶೇ. 15 ರಷ್ಟು ರಿಯಾಯಿತಿ ಲಭ್ಯವಿರುತ್ತದೆ.

ರಾಜ್ಯದ್ಯಾಂತ ಗುರುತಿಸಲ್ಪಟ್ಟ 515 ಆಸ್ಪತ್ರೆಗಳು ಯೋಜನೆಯಡಿ ಸೇವೆ ನೀಡುತ್ತಿದ್ದು, ಈ ಯೋಜನೆಯಡಿ ಹೃದಯ ಶಸ್ತ್ರ ಚಿಕಿತ್ಸೆ, ಕೀಲು ಶಸ್ತ್ರ ಚಿಕಿತ್ಸೆ, ಉದರ ಶಸ್ತ್ರ ಚಿಕಿತ್ಸೆ, ಸಾಮಾನ್ಯ ಹೆರಿಗೆ, ಶಸ್ತ್ರ ಚಿಕಿತ್ಸೆ, ಕಿಡ್ನಿ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಇತ್ಯಾದಿ ಒಟ್ಟು 823 ವಿವಿಧ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ಸೌಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಹಕಾರ ಸಂಘಗಳ ಉಪನಿಬಂಧಕರು, ಕೊಡಗು ಜಿಲ್ಲೆ (08272-228519) ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ (08272-225728) ಈ ಕಚೇರಿಯನ್ನು ಅಥವಾ ಹತ್ತಿರದ ಸಹಕಾರ ಸಂಘವನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.