ನಾಪೆÇೀಕ್ಲು, ಮೇ 23: ತಾವು ಹಿಂದಿನಿಂದಲೂ ನಡೆದಾಡುತ್ತಿರುವ ರಸ್ತೆಗೆ ರೆಸಾರ್ಟ್‍ನವರು ಬೇಲಿ ಅಳವಡಿಸಿದ್ದು, ಮನೆಗಳಿಗೆ ತೆರಳಲು ರಸ್ತೆಯಿಲ್ಲದಂತಾಗಿದೆ, ರಸ್ತೆಯನ್ನು ತೆರವುಗೊಳಿಸಿಕೊಡುವಂತೆ ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ ಹಾಗೂ ಸತ್ಯಾನ್ವೇಶಣೆ ಸಮಿತಿ ಅಧ್ಯಕ್ಷ ಕೇಟೋಳಿರ ಸನ್ನಿ ಸೋಮಣ್ಣ ನೇತೃತ್ವದಲ್ಲಿ ಕೆರೆತಟ್ಟು ಕಾಲೋನಿಯ ಅಡಿಯ ಜನಾಂಗದವರು ತಾಮರ ರೆಸಾರ್ಟ್ ಮುಖ್ಯ ಗೇಟು ಬಳಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಅಡಿಯ ಜನಾಂಗದ ಮುಖಂಡ ಚಾತ ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳ ಆಗಮನ ನಿರೀಕ್ಷೆಯಲ್ಲಿದ್ದ ಪ್ರತಿಭಟನಾಕಾರರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ತಂಡ ಕಕ್ಕಬೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದು, ಕಡತಗಳ ಪರಿಶೀಲನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು.

ಈ ಅಧಿಕಾರಿಗಳ ಆಗಮನಕ್ಕಾಗಿ 3.30 ಗಂಟೆಯವರೆಗೆ ಕಾದರೂ ಅಧಿಕಾರಿಗಳು ಬಾರದೇ, ನಾಪೆÇೀಕ್ಲು ಕಂದಾಯ ವೃತ್ತ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿದ ಬಗ್ಗೆ ತಿಳಿದುಬಂತು. ಕಂದಾಯ ಪರಿವೀಕ್ಷಕ ರಾಮಯ್ಯ ಆಗಮಿಸುತ್ತಿದ್ದಂತೆ ಸಿಟ್ಟಿಗೆದ್ದು ವಾಗ್ವಾದ ನಡೆಸಿದ ಘಟನೆಯು ನಡೆಯಿತು.

ಈ ಸಂದರ್ಭ ಮಾತನಾಡಿದ ಕಂದಾಯ ನಿರೀಕ್ಷಕ ರಾಮಯ್ಯ ಎರಡು ತಿಂಗಳ ಹಿಂದೆ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರಿಗೆ ಅಡಿಯ ಜನಾಂಗದವರು ರಸ್ತೆ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸರ್ವೆ ನಡೆಸಿ ರಸ್ತೆ ತೆರವುಗೊಳಿಸಿಕೊಡಬೇಕೆಂದು ನೀಡಿದ ಆದೇಶದಂತೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಸರ್ವೆ ನಡೆಸಲಾಯಿತು. ಈ ಸಂದರ್ಭ ಮುಖ್ಯಗೇಟಿನಿಂದ 200 ಮೀ.ವರೆಗೆ ಸಾರ್ವಜನಿಕ ರಸ್ತೆಯಿದ್ದು, ಉಳಿದ ರಸ್ತೆಯು ತಾಮರ ರೆಸಾರ್ಟ್ ಕಾಫಿ ತೋಟದ ಮೂಲಕ ಹಾದುಹೋಗುತ್ತಿರುವದು ಕಂಡು ಬಂತು. ಈ ರಸ್ತೆ ನಮಗೆ ಬೇಡವೆಂದು ಅಡಿಯ ಜನಾಂಗದವರು ಪಟ್ಟು ಹಿಡಿದ ಕಾರಣ ರೆಸಾರ್ಟ್‍ನವರೊಂದಿಗೆ ಬೇರೆ ಕಡೆಯಲ್ಲಿ ರಸ್ತೆ ನೀಡುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುವದಾಗಿ ಹಾಗೂ ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಲಾಗಿತ್ತು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡಿಯ ಜನಾಂಗದ ಪ್ರಮುಖರು ಮುಖ್ಯಗೇಟನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ಅಧಿಕಾರಿಗಳ ಆಗಮನದ ಬಗ್ಗೆ ಮಾಹಿತಿ ದೊರೆತರೆ ತೆರೆದಿಡಲಾಗುತ್ತದೆ. ಮೇಲ್ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಿ ನಮಗೆ ಹೋಗಲು ಅನುವು ಮಾಡಿಕೊಡಿ ಎಂದು ವಿನಂತಿಸಿಕೊಂಡರು.

ಕೂಡಲೇ ಕಾರ್ಯಪ್ರವೃತ್ತರಾದ ಕಂದಾಯ ಪರಿವೀಕ್ಷಕರು ಅಡಿಯ ಜನಾಂಗ, ಮಾಧ್ಯಮದವರೊಂದಿಗೆ ಸ್ಥಳಕ್ಕೆ ತೆರಳಿದರಾದರೂ ತಂತಿ ಬೇಲಿಯನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ.