ನಾಪೋಕ್ಲು, ಮೇ 23: ಪಾಣತ್ತೂರು - ಭಾಗಮಂಡಲ - ಕಾಟಕೇರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಪರಿವರ್ತನೆಯಾಗಲಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಅವರು ಇಂದು ಬೆಟ್ಟಗೇರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಗ್ರಾಮ ಸಡಕ್ ಯೋಜನೆಯಲ್ಲಿ ಬಿಡುಗಡೆಯಾಗಿರುವ ರೂ. 9 ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ತಲಕಾವೇರಿ - ಬೆಟ್ಟಗೇರಿ – ಮಡಿಕೇರಿ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಇದೀಗ ಪಾಣತ್ತೂರಿನಿಂದ ಕಾಟಕೇರಿಗೆ ಅಂತರರಾಜ್ಯ ಸಂಪರ್ಕ ರಾಷ್ಟ್ರೀಯ ಹೆದ್ದಾರಿಯಾಗಿ ಲೋಕಸಭಾ ಸದಸ್ಯರ ಪ್ರಯತ್ನದಿಂದ ಆಗಲಿದೆ. ಇದರ ಟೆಂಡರ್ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದ ಅವರು ಈ ರಾಷ್ಟ್ರೀಯ ಹೆದ್ದಾರಿ 53 ಕಿ.ಮೀ. ಉದ್ದವಿದ್ದು, ಇದರಲ್ಲಿ ಒಂಭತ್ತು ಕಿ.ಮೀ. ಅರಣ್ಯಪ್ರದೇಶದಲ್ಲಿ ಸಾಗಲಿದೆ ಎಂದರು. ಇದಕ್ಕೆ ಪರಿಹಾರವಾಗಿ ಅರಣ್ಯ ಇಲಾಖೆಗೆ ತಣ್ಣಿಮಾನಿಯಲ್ಲಿ ಜಾಗ ನೀಡುವದಾಗಿ ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ಪ್ರಾರಂಭಗೊಂಡ ಬಹು ಉಪಯೋಗಿ ಗ್ರಾಮಸಡಕ್ ರಸ್ತೆ 35 ಅಡಿ ಜಾಗವನ್ನು ಸಾರ್ವಜನಿಕರು ಬಿಟ್ಟುಕೊಟ್ಟು ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ಮನವಿ

(ಮೊದಲ ಪುಟದಿಂದ) ಮಾಡಿದ ಅವರು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ರಸ್ತೆ ಬದಿಯ ಮರಗಳ ಸರ್ವೆ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಸಮಸ್ಯೆಯಾಗದಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ತೆರವುಗೊಳಿಸಲು ಮುಂದಾಗಬೇಕು ಎಂದರು. ಪ್ರಧಾನಮಂತ್ರಿ ನರೇಂದ್ರಮೋದಿ ಇದೀಗ 10 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಅವರ ಮೂಲಕ ದೊರಕಲಿದ್ದು, ಇದರಿಂದ ಬಾಕಿ ಉಳಿದ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಸದಸ್ಯ ಕೊಡಪಾಲು ಗಪ್ಪು ಗಣಪತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶಾಂತಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಯಾಲದಾಳು ಪದ್ಮಾವತಿ, ಆರ್‍ಎಂಸಿ ಸದಸ್ಯ ಬೆಪ್ಪುರನ ಮೇದಪ್ಪ, ಬೆಟ್ಟಗೇರಿ, ವಿಎಸ್‍ಎಸ್‍ಎನ್ ಅಧ್ಯಕ್ಷ ಎಡಿಕೇರಿ ವಾಸುದೇವ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ್ಷೆ ತಳೂರು ಶಾಂತಿ, ಮಾಜಿ ಅಧ್ಯಕ್ಷ ಬಿ.ಎ. ರಾಮಣ್ಣ, ಮನು, ಬಿಜೆಪಿ ಕಾರ್ಯ ಸಮಿತಿ ಅಧ್ಯಕ್ಷ ವಿಜಯಕುಮಾರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ತಳೂರು ಕಿಶೋರ್‍ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಬೆಳ್ಳಿಯನ ರವಿ ನಿರೂಪಿಸಿ, ಬೆಪ್ಪುರನ ಮೇದಪ್ಪ ವಂದಿಸಿದರು. - ದುಗ್ಗಳ