ವೀರಾಜಪೇಟೆ, ಮೇ 23: ಶಿಕ್ಷಣ ದೇಶದಲ್ಲಿ ಪರಿವರ್ತಿತ ಸಮಾಜವನ್ನು ನಿರ್ಮಾಣ ಮಾಡುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವದರಿಂದ ಕುಟುಂಬ, ಸಮಾಜದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಜಾತಿ ಬೇಧವಿಲ್ಲದೆ ಪ್ರತಿಯೊಬ್ಬ ಮಕ್ಕಳಿಗೂ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.ವೀರಾಜಪೇಟೆ ಸುಣ್ಣದ ಬೀದಿಯಲ್ಲಿರುವ ಮದೀನ ಎಜುಕೇಶನ್ ಸೆಂಟರ್‍ನ ಬಡ ಮಕ್ಕಳ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ ಸಮಾಜ ಸೇವಾ ಸಂಸ್ಥೆಗಳು ಉದಾರ ದಾನಿಗಳ ಹಾಗೂ ಸರಕಾರದ ಸಹಾಯ ಧನದಿಂದ ಇಂತಹ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿರುವದು ಶ್ಲಾಘನೀಯ. ಬಡ ಮಕ್ಕಳ ಶಿಕ್ಷಣ ಸೇವೆಯ ಯೋಜನೆಗಳು ನಿರಂತರವಾಗಿ ಮುಂದುವರೆಯಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಮಾತನಾಡಿ ಬಡ ಮಕ್ಕಳ ಉಚಿತ ಶಿಕ್ಷಣ ಕೇಂದ್ರಕ್ಕೆ ಪಟ್ಟಣ ಪಂಚಾಯಿತಿ ಕಾಯಿದೆಯಡಿಯಲ್ಲಿ ಕಾನೂನು ಬದ್ಧವಾಗಿರುವ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ, ಬಡ ಮಕ್ಕಳ ವಿದ್ಯಾರ್ಥಿ ನಿಲಯ ಕಾಮಗಾರಿ ಆರಂಭಗೊಂಡು ಆರ್ಥಿಕ ಪರಿಸ್ಥಿತಿ ಮುಗ್ಗಟ್ಟಿನಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತ್ತು. ಈ ನಿಟ್ಟಿನಲ್ಲಿ ಶಾಸಕ ಬೋಪಯ್ಯ ಅವರನ್ನು ಭೇಟಿಯಾದಾಗ ತಕ್ಷಣ ಸರಕಾರದಿಂದ ರೂ ಮೂರು ಲಕ್ಷ ಅನುದಾನ ಬಿಡುಗಡೆಗೆ ನೆರವಾದರು. ಅನುದಾನದ ಹಣದಿಂದ ಹಾಗೂ ದಾನಿಗಳ ಸಹಕಾರದಿಂದ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷÀ ಅಬ್ದುಲ್ ರೆಹಮಾನ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶ ಜಾತ್ಯತೀತ ಕಂಪಿನಿಂದ ಕೂಡಿದೆ. ವರ್ಗ ಬೇಧವನ್ನರಿಯದೆ ಎಲ್ಲರೂ ಸಮಾನರು. ಶಿಕ್ಷಣಕ್ಕೆ ಯಾವದೇ ವರ್ಗ, ಜಾತಿಯ ಮೇಲು ಕೀಳೆಂಬ ಭಾವನೆ ಇಲ್ಲ. ಸಮಾಜ ಸೇವಾ ಸಂಸ್ಥೆಗಳಿಂದ ಕಡು ಬಡವರು, ಅನಾಥರಿಗೂ ಉದಾರಿಗಳ ಸಹಕಾರದಿಂದ ಶಿಕ್ಷಣ ದೊರೆಯುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶಾಫಿ ಜಾಮಿಯಾ ಮಸೀದಿಯ ಅಧ್ಯಕ್ಷ ಹಾಜಿ ಖಾದರ್ ಬಾಷಾ, ಹೋಪ್ ಟ್ರಸ್ಟ್‍ನ ಕೆ.ಎ. ಅಬ್ಬಾಸ್, ಸಮಾಜ ಸೇವಕ ಡಿ.ಐ. ಎಜಾಸ್ ಅಹಮ್ಮದ್ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಫಾಹಿಮ್, ಉಪಾಧ್ಯಕ್ಷ ಕಬೀರ್ ಅಹಮ್ಮದ್, ಪದಾಧಿಕಾರಿಗಳಾದ ಮನ್ಸೂರ್, ಯಾಸಿರ್ ಹಾಜರಿದ್ದರು. ಸುಣ್ಣದ ಬೀದಿಯ ಬಿಸ್ಮಿಲ್ಲಾ ಶಾವಲಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ನಿರೂಪಿಸಿದರು.