*ಗೋಣಿಕೊಪ್ಪಲು, ಮೇ 24: ಇಂದು ಮುಂಜಾನೆ 3.30ಕ್ಕೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಸಿಡಿಲಿನ ಆರ್ಭಟವು ಹೆಚ್ಚಾಗಿತ್ತು. ಮನೆಯಲ್ಲಿ ಮಲಗಿದ್ದ ಯರವರ ಕಾವೇರಿ, ಪಾಲ ಮತ್ತು ರಾಜು ಇವರುಗಳಿಗೆ ಸಿಡಿಲು ಬಡಿದು ತೀವ್ರ ಗಾಯಗಳಾಗಿವೆ.
ಕಾವೇರಿಯ ಕೈ ಹಾಗೂ ಬೆನ್ನು, ರಾಜುವಿನ ಕಿವಿಗೆ, ಪಾಲನ ತೊಡೆಯ ಭಾಗಕ್ಕೆ ಸಿಡಿಲು ಬಡಿದು ಗಾಯಗಳಾಗಿವೆ. ಪಾಲ ತೊಟ್ಟಿದ್ದ ಜೀನ್ಸ್ ಪ್ಯಾಂಟ್ ಪೂರ್ಣ ಹರಿದು ಹೋಗಿದೆ. ಜತೆಗೆÉ ಮನೆಯ ಗೋಡೆಗಳಿಗೆ ಸಿಡಿಲು ಅಪ್ಪಳಿಸಿ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಟಿ.ವಿ. ಟೇಬಲ್ ಮತ್ತು ಇನ್ನಿತರ ಪೀಠೋಪಕರಣಗಳಿಗೂ ಹಾನಿ ಉಂಟಾಗಿದೆ. ಗಾಯಾಳುಗಳು ಟಿ. ಶೆಟ್ಟಿಗೇರಿ ನಿವಾಸಿ ಕಾಫಿ ಬೆಳೆಗಾರ ಕಾಳೇಂಗಡ ಮಧು ಅವರ ತೋಟ ಕಾರ್ಮಿಕ ರಾಗಿದ್ದಾರೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಜು, ಪೊನ್ನಂಪೇಟೆ ಪೊಲೀಸ್ ಠಾಣಾ ಉಪನಿರೀಕ್ಷಕ ಜಯರಾಮ್ ಭೇಟಿ ನೀಡಿದರು.
ಚಿತ್ರ ವರದಿ-ಎನ್.ಎನ್. ದಿನೇಶ್