ವೀರಾಜಪೇಟೆ: ಮೇ24 ವೀರಾಜಪೇಟೆ ವಿಭಾಗದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಇಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಬೆಳಗ್ಗಿನಿಂದಲೇ ಪೆಟ್ರೋಲ್ ಬಂಕ್, ಹೊಟೇಲ್, ಅಂಗಡಿಗಳ ಮೇಲೆ ಧಾಳಿ ನಡೆಸಿತು.ಗೋಣಿಕೊಪ್ಪ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ನ ಮೇಲೆ ಬಾಲ ಕಾರ್ಮಿಕರಿಗಾಗಿ ಧಾಳಿ ನಡೆಸಿದಾಗ ಹದಿನಾರು ವರ್ಷದ ಇಬ್ಬರು ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಪೆಟ್ರೋಲ್ ಬಂಕ್‍ನಲ್ಲಿ ಇಲ್ಲಿನ ಮಲೆತಿರಿಕೆ ಬೆಟ್ಟದ ನಿವಾಸಿ ತಮಿಳರ ಮಣಿ ಎಂಬವರ ಮಗ, ಬೋಯಿಕೇರಿಯ ರಂಗೇಗೌಡ ಅವರ ಮಗ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ. ಅಧಿಕಾರಿಗಳ ತಂಡ ಮಹಜರು ನಡೆಸಿ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವದು ಎಂದು ಅಧಿಕಾರಿಗಳ ತಂಡ ತಿಳಿಸಿದೆ.
ಕಾರು ನಿಲ್ದಾಣದಲ್ಲಿರುವ ಹೊಟೇಲ್‍ಗೆ ಧಾಳಿ ಮಾಡಿದ ಅಧಿಕಾರಿಗಳ ತಂಡ ಅಲ್ಲಿಯೂ ಒಬ್ಬ ಬಾಲ ಕಾರ್ಮಿಕನನ್ನು ಪತ್ತೆ ಹಚ್ಚಿದೆ. ಬಾಲಕನೊಬ್ಬ ಗಿರಾಕಿಗಳಿಗೆ ತಿಂಡಿ ಪಾನೀಯ ಸರಬರಾಜು ಮಾಡುತ್ತಿದ್ದು ಪತ್ತೆಯಾಗಿದೆ. ರಂಗೇಗೌಡ ಎಂಬವರ ಮಗನಾಗಿದ್ದಾನೆ. ಅಧಿಕಾರಿಗಳ ತಂಡ ಹೊಟೇಲ್‍ನ್ನು ಮಹಜರು ನಡೆಸಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಕ್ರಮ ಕೈಗೊಂಡಿದೆ.
ಅಧಿಕಾರಿಗಳ ತಂಡದ ಧಾಳಿಯಲ್ಲಿ ಮಡಿಕೇರಿಯ ಹಿರಿಯ ಕಾರ್ಮಿಕ ಅಧಿಕಾರಿ ಎಂ.ಎಂ. ಯತ್ನಿಕ್, ಸೋಮವಾರಪೇಟೆ ವಿಭಾಗದ ಹಿರಿಯ ಅಧಿಕಾರಿ ಮಹದೇವಸ್ವಾಮಿ, ಮಡಿಕೇರಿಯ ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಅಧಿಕಾರಿ ಆರ್. ಸಿರಾಜ್ ಅಹಮ್ಮದ್, ರೆವಿನ್ಯೂ ಇನ್ಸ್‍ಪೆಕ್ಟರ್ ಶ್ರೀನಿವಾಸ್, ಆರೋಗ್ಯಾಧಿಕಾರಿ ಡಾ. ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸಹಾಯಕ ವೆಂಕಟೇಶ್, ಪೊನ್ನಂಪೇಟೆಯ ಶಿಶು ಅಭಿವೃದ್ಧಿ ಕಲ್ಯಾಣ ಯೋಜನೆಯ ಅಧಿಕಾರಿ ಲೀಲಾವತಿ, ವೀರಾಜಪೇಟೆಯ ಕಾರ್ಮಿಕ ಅಧಿಕಾರಿ ವನಜಾಕ್ಷಿ, ನಗರ ಪೊಲೀಸರು ಧಾಳಿಯಲ್ಲಿ ಪಾಲ್ಗೊಂಡಿದ್ದರು.