ಮಡಿಕೇರಿ, ಮೇ 23: ಕೊಡಗು ಜಿಲ್ಲೆಯಲ್ಲಿ ಅತಂತ್ರರಾಗಿರುವ ಆದಿವಾಸಿಗಳಿಗೆ ಶಾಶ್ವತ ನೆಲೆಯೊಂದಿಗೆ ಬದುಕು ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಯಡಿ ಜಿಲ್ಲಾ ಆಡಳಿತ ಸದಾ ಬದ್ಧವಿದ್ದು, ಮುಗ್ಧ ಆದಿವಾಸಿಗಳು ಈ ದಿಸೆಯಲ್ಲಿ ಪಟ್ಟಭದ್ರರ ಚಿತಾವಣೆಗೆ ಕಿವಿಗೊಡದೆ ಆಡಳಿತ ವ್ಯವಸ್ಥೆಯಲ್ಲಿ ವಿಶ್ವಾಸವಿಡ ಬೇಕೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಆದಿವಾಸಿಗಳಿಗೆ ಪುನರ್ವಸತಿ ಕುರಿತು ‘ಶಕ್ತಿ' ಅಭಿಪ್ರಾಯ ಬಯಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಕೊಡಗಿನ ಬ್ಯಾಡಗೊಟ್ಟ, ಬಸವನಹಳ್ಳಿ ಹಾಗೂ ಕೆದಮುಳ್ಳೂರುವಿನ ಸುಸಜ್ಜಿತ ನಿವೇಶನಗಳಲ್ಲಿ ತಕ್ಷಣದಿಂದ ನೆಲೆಗೊಳ್ಳುವಂತೆ ಗಿರಿಜನರಿಗೆ ಮನವಿ ಮಾಡಿದರು.

ಅತಂತ್ರ ಸ್ಥಿತಿಯ ಎಲ್ಲಾ ಕುಟುಂಬಗಳು ಜಿಲ್ಲಾ ಆಡಳಿತ ಕಲ್ಪಿಸುವ ವ್ಯವಸ್ಥೆಗೆ ಹೊಂದಿಕೊಂಡರೆ, ಆ ಕುಟುಂಬಗಳಿಗೆ ಆರೋಗ್ಯ, ಉದ್ಯೋಗ, ಮೂಲಭೂತ ಸೌಕರ್ಯ ಗಳನ್ನು ರೂಪಿಸಲು ಆಡಳಿತಕ್ಕೆ ಅನುಕೂಲವೆಂದು ಬೊಟ್ಟುಮಾಡಿದ ಜಿಲ್ಲಾಧಿಕಾರಿ ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸೌಲಭ್ಯ ರೂಪಿಸಲಾಗು ವದು ಎಂದು ಭರವಸೆ ನೀಡಿದರು.

ಕೆದಮುಳ್ಳೂರುವಿನಲ್ಲಿ ಎಲ್ಲಾ ಸೌಲಭ್ಯದೊಂದಿಗೆ 176 ಕುಟುಂಬ ಗಳಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಂಡಿದ್ದು, ಈ ಭಾಗದಲ್ಲಿ ನೂರಾರು ವರ್ಷಗಳಿಂದ ಬದುಕುತ್ತಿರುವ ಗ್ರಾಮವಾಸಿಗಳನ್ನು ಜಿಲ್ಲಾಧಿಕಾರಿ ಉದಾಹರಿಸಿದರು. ಅಂತಹ ಕಡೆ ಒಟ್ಟಿಗೆ ಆದಿವಾಸಿಗಳು ವಾಸಕ್ಕೆ ತೆರಳಿ ಸರಕಾರದ ಯೋಜನೆ ಬಳಸಿಕೊಳ್ಳುವಂತೆ ತಿಳಿಹೇಳಿದರು.

ಬ್ಯಾಡಗೊಟ್ಟ, ಬಸವನಹಳ್ಳಿ, ಕೆದಮುಳ್ಳೂರು ಸೇರಿದಂತೆ ಮುಂದೆ ದಕ್ಷಿಣ ಕೊಡಗಿನ ಇನ್ನು ಹಲವೆಡೆಗಳಲ್ಲಿ ಪ್ರಕೃತಿಯ ನಡುವೆ ಆದಿವಾಸಿಗಳ ವಸತಿ ಯೋಜನೆ ವಿಸ್ತರಿಸಲು ಜಿಲ್ಲಾಡಳಿತ ಬದ್ಧವೆಂದು ಪುನರುಚ್ಚರಿಸಿದ ಡಿ.ಸಿ. ಜಿಲ್ಲೆಯ ಶಾಂತಿಗೆ ಭಂಗಗೊಳಿಸಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಮಂದಿ ಬಗ್ಗೆ ಕೊಡಗಿನ ಜನ ಜಾಗೃತರಾಗ ಬೇಕೆಂದು ಕರೆ ನೀಡಿದರು.

ಕೊಡಗಿನ ಜ್ವಲಂತ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸುವ ದಿಸೆಯಲ್ಲಿ ಜನತೆ ಕಾರ್ಯಾಂಗ ದೊಂದಿಗೆ ಸಹಕರಿಸಬೇಕೆಂದ ಅವರು, ಜಿಲ್ಲೆಯ ಹಿತಕ್ಕೆ ಧಕ್ಕೆ ಉಂಟುಮಾಡು ವವರ ವಿರುದ್ಧ ಸಂಘಟಿತ ಪ್ರಯತ್ನ ಅವಶ್ಯಕವೆಂದು ಅಭಿಪ್ರಾಯಪಟ್ಟರು.

-ಶ್ರೀಸುತ.