ಸೋಮವಾರಪೇಟೆ, ಮೇ 24: ತಾಲೂಕಿನ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ವರ್ಷದಲ್ಲಿ ಕಾಫಿ ತೋಟಗಳಲ್ಲಿ ಅಧಿಕ ಹೂವಾಗಿದೆ. ಇದಕ್ಕೆ ಪೂರಕವಾಗಿ ಪೌಷ್ಟಿಕಾಂಶಗಳನ್ನು ನೀಡಿದ್ದಲ್ಲಿ ಉತ್ತಮ ಫಸಲನ್ನು ನಿರೀಕ್ಷಿಸ ಬಹುದಾಗಿದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ಕಾಫಿ ಗಿಡಗಳಲ್ಲಿ ಫಸಲು ಕಾಯಿಕಟ್ಟಲು ರಂಜಕದ ಅಂಶ ಅಗತ್ಯವಿದೆ. ಆದ್ದರಿಂದ ನೀರಿನಲ್ಲಿ ಕರಗುವ ರಂಜಕದ ಅಂಶ ಹೊಂದಿದ ಡಿ.ಎ.ಪಿ. ಅಥವಾ ಯಾವದೇ ಕಾಂಪ್ಲೆಕ್ಸ್ ಗೊಬ್ಬರಗಳ ಮಿಶ್ರಣವನ್ನು ನೀಡುವದು ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.
ಹವಾಮಾನ ಇಲಾಖೆಯ ವರದಿಯಂತೆ ಈ ವರ್ಷ ಉತ್ತಮ ಮುಂಗಾರು ಆಗುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಎಲೆ ಚುಕ್ಕಿ ರೋಗ ಹಾಗೂ ಕೊಳೆರೋಗ ಕಂಡು ಬರುತ್ತದೆ. ಆದ್ದರಿಂದ ಬೆಳೆಗಾರರು ಜೂನ್ ಮೊದಲ ವಾರದೊಳಗೆ 1.0% ಬೋಡೋ ದ್ರಾವಣದ ಸಿಂಪರಣೆಯನ್ನು ಮಾಡುವದು ಉತ್ತಮ. ಮುಂಗಾರು ಆರಂಭವಾಗುವ ಮುನ್ನವೇ ಎಲ್ಲ ತೊಟ್ಟಿಲು ಗುಂಡಿಗಳನ್ನು ಸ್ವಚ್ಛಗೊಳಿಸುವದು ಕೊಳೆ ರೋಗ ತಡೆಯುವಲ್ಲಿ ಸಹಾಯವಾಗುತ್ತದೆ ಎಂದು ಮುರಳೀಧರ್ ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಳೆಗಾರರು ಹೆಕ್ಸಕೊನಜೋಲ್ (ಕಾಂಟಾಫ್) ಬಳಸುವದು ಸಾಮಾನ್ಯವಾಗಿದ್ದು, ಇದರೊಂದಿಗೆ ಬೇರೆ ಇನ್ಯಾವದೇ ಕೀಟನಾಶಕಗಳು ಅಥವಾ ಗೊಬ್ಬರಗಳನ್ನು ಮಿಶ್ರ ಮಾಡಬಾರದು. ಬೋಡೋ ಅಥವಾ ಕಾಂಟಾಫ್ ಶಿಲೀಂಧ್ರ ನಾಶಕಗಳನ್ನು ಗಿಡದ ಎಲೆಗಳ ತಳ ಭಾಗಕ್ಕೆ ಸಿಂಪಡಿಸಬೇಕು ಎಂದು ಮುರಳೀಧರ್ ತಿಳಿಸಿದ್ದಾರೆ.
ಕಳೆದ ವರ್ಷದ ಬರದಿಂದಾಗಿ, ಅನೇಕ ತೋಟಗಳಲ್ಲಿ, ಬಿಸಿಲು ಹೆಚ್ಚು ಬೀಳುವ ಪ್ರದೇಶಗಳಲ್ಲಿ ಡೈ-ಬ್ಯಾಕ್ (ಗಿಡದ ರೆಕ್ಕೆಗಳು ತುದಿಯಿಂದ ಒಣಗುತ್ತಾ ಹೋಗುವ ಒಂದು ಕಾಯಿಲೆ) ಕಂಡು ಬಂದಿದೆ. ಬೆಳೆಗಾರರು ಅಂತಹ ರೆಕ್ಕೆಗಳನ್ನು ಕತ್ತರಿಸಿ ಆ ಗಿಡಗಳಿಗೆ ಯೂರಿಯ ಗೊಬ್ಬರವನ್ನು ನೀಡಬೇಕು. ಇದರಿಂದ ಹೊಸ ಚಿಗುರು ಬಂದು ರೆಕ್ಕೆಗಳು ಮೊದಲಿನಂತೆ ಹಸಿರಾಗುತ್ತವೆ. ಗೊಬ್ಬರದ ಬಳಕೆ, ಬೋಡೋ ದ್ರಾವಣದ ತಯಾರು ಮಾಡುವ ವಿಧಾನ ಹಾಗೂ ಹೆಚ್ಚಿನ ವಿವರಗಳಿಗೆ ಕಾಫಿ ಮಂಡಳಿಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಮುರಳೀಧರ್ ಮಾಹಿತಿ ನೀಡಿದ್ದಾರೆ.