ಸುಂಟಿಕೊಪ್ಪ, ಮೇ 23: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ಕೆರೆಯೊಂದರಲ್ಲಿ ಹೂಳು ಎತ್ತುವ ಸಂದರ್ಭ ಕೆರೆಯ ಸುತ್ತ ಕಟ್ಟಿದ್ದ ತಡೆಗೋಡೆಯ ಕಲ್ಲುಗಳು ತೆಗೆದ ನಂತರದಲ್ಲಿ ಕಾಣೆಯಾಗಿದ್ದು ಕಲ್ಲುಗಳನ್ನು ಕೊಂಡೊಯ್ಯಲಾಗಿದ್ದು ಅವುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಳ್ಳೂರು ಸಾರ್ವಜನಿಕರು ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಂಬಾರಶೆಟ್ಟಿ ಎಂಬ ಕೆರೆಯೊಂದಿದ್ದು, ಅದಕ್ಕೆ ಅಂದಾಜು ಸುಮಾರು 20 ವರ್ಷಗಳ ಹಿಂದೆಯೇ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿತ್ತು.
ಇತ್ತೀಚೆಗೆ ತಾ.ಪಂ. ಅನುದಾನದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂದರ್ಭ ತಡೆಗೋಡೆಯ ಕಲ್ಲನ್ನು ತೆರವುಗೊಳಿಸಲಾಗಿದ್ದು, ತೆರವುಗೊಳಿಸಿದ ತಡೆಗೋಡೆಯ ಕಲ್ಲುಗಳು ನಾಪತ್ತೆಯಾಗಿರುವದು ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕೆರೆಯ ಪಕ್ಕದಲ್ಲೇ ಸಾರ್ವಜನಿಕ ರಸ್ತೆಯಿದ್ದು, ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ ಮಳೆಗಾಲ ಆರಂಭವಾದರೆ ನೀರು ಕೆರೆ ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಕಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಎಚ್ಚೆತ್ತುಕೊಂಡು ಕಲ್ಲು ವಶಪಡಿಸಿಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮಳ್ಳೂರು ಗ್ರಾಮಸ್ಥರಾದ ವಿಜಯ, ಶಂಕರನಾರಾಯಣ, ಸಂದೀಪ್, ಚೂಮಣಿ (ರಘು), ಶಂಕರ, ಮಂಜುಳ, ಪಂಕಜ, ಹರೀಶ್,ಕಿಟ್ಟ, ಸುರೇಶ್, ಶೇಖರ್, ಪುಟ್ಟ ಇವರುಗಳು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಅಧ್ಯಕ್ಷರನ್ನು ಹಾಗೂ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಇಂಜಿನಿಯರ್ ಅವರನ್ನು ಕರೆಸಿ ಮಾಹಿತಿ ಕೊಡುವಂತೆ ಕೇಳಬೇಕು ಮತ್ತು ಆ ಕೆರೆಯಲ್ಲಿದ್ದ ಕಲ್ಲನ್ನು ತರಿಸಿ ಯಥಾಸ್ಥಿತಿ ತಡೆಗೋಡೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಗ್ರಾ.ಪಂ.ಗೆ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.