ಸುಂಟಿಕೊಪ್ಪ, ಮೇ 23 : ಬ್ಲೂ ಬಾಯ್ಸ್ ಯೂತ್ ಕ್ಲಬ್ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 22ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್ಬಾಲ್ ಟೂರ್ನಿಯ ಮಂಗಳವಾರ ನಡೆದ ಪಂದ್ಯಾವಳಿಯಲ್ಲಿ ಮೊಗ್ರಲ್ ಕುಂಬ್ಳೆ ಮತ್ತು ಹಾರಿಜನ್ ಎಫ್.ಸಿ. ಬೆಂಗಳೂರು ತಂಡಗಳು ಗೆಲುವು ಸಾಧಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆಯಿಟ್ಟವು.
ಇಲ್ಲಿನ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಮೊದಲ ಪಂದ್ಯಾವಳಿ ಜೆಆರ್ಟಿ ಮೊಗ್ರಲ್ ಕುಂಬ್ಳೆ ಮತ್ತು ಟಿಡಿಎಲ್ ಎಫ್ಸಿ ಬೈಲುಕೊಪ್ಪ ತಂಡಗಳ ನಡುವೆ ನಡೆದು ಮೊದಲಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶನ ನೀಡುತ್ತಾ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ರಸದೌತಣವನ್ನೇ ನೀಡಿದವು. ಪ್ರೇಕ್ಷಕರು ಶಿಳ್ಳೆ ಹಾಗೂ ಕೇಕೆಗಳೊಂದಿಗೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವಾಗಲೇ ಮೊದಲಾರ್ಧದ 24ನೇ ನಿಮಿಷದಲ್ಲಿ ಜೆಆರ್ಟಿ ಮೊಗ್ರಲ್ ಕುಂಬ್ಳೆ ತಂಡದ ಮುನ್ನಡೆ ಆಟಗಾರ ಸಿರಾಜ್ ಟಿಡಿಎಲ್ ತಂಡದ ವಿರುದ್ಧ 1 ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಬಿರುಸಿನ ಆಟಕ್ಕೆ ಇಳಿದ ಟಿಡಿಎಲ್ ಬೈಲುಕೊಪ್ಪ ತಂಡವು 5ನೇ ನಿಮಿಷದಲ್ಲಿ 1 ಗೋಲುಗಳಿಸಿ ಸಮಬಲ ಕಂಡುಕೊಂಡಿತು. ಕೊನೆಯ ಹಂತದಲ್ಲಿ ಕುಂಬ್ಳೆ ತಂಡದ ಶಾಜಿಲ್ 23ನೇ ನಿಮಿಷದಲ್ಲಿ 1 ಗೋಲುಗಳಿಸುವ ಮೂಲಕ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡು ಮುಂದಿನ ಸುತ್ತಿಗೆ ಪ್ರವೇಶಿಸಿತು.
ದ್ವಿತೀಯ ಪಂದ್ಯಾವಳಿಯಲ್ಲಿ ನ್ಯೂ ಫೈಟರ್ಸ್ ಎಫ್ ಸಿ ಕೂಟುಪರಂಬು ಮತ್ತು ಹಾರಿಜನ್ ಎಫ್ ಸಿ ಬೆಂಗಳೂರು ತಂಡಗಳ ನಡುವೆ ನಡೆದು ಪ್ರಥಮಾರ್ಧದ 18ನೇ ನಿಮಿಷದಲ್ಲಿ ಹಾರಿಜನ್ ತಂಡದ ಮುನ್ನಡೆ ಆಟಗಾರ 1 ಗೋಲು ಗಳಿಸುವ ಮೂಲಕ ಬೆಂಗಳೂರು ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ದ್ವಿತಿಯಾರ್ಧದಲ್ಲಿ ಹಾರಿಜನ್ ತಂಡದ ಮುನ್ನಡೆ ಆಟಗಾರ ಗಿರಿ 6ನೇ ನಿಮಿಷದಲ್ಲಿ ಮತ್ತೊಂದು ಗೋಲನ್ನು ಬಾರಿಸುವ ಮೂಲಕ ಎದುರಾಳಿ ತಂಡವನ್ನು ಮತ್ತಷ್ಟು ಹಿಡಿತಕ್ಕೆ ತೆಗೆದುಕೊಂಡರಲ್ಲದೆ ಎದುರಾಳಿ ತಂಡವನ್ನು ಗೋಲುಗಳಿಸದಂತೆ ನೋಡಿ ಕೊಂಡರಲ್ಲದೆ 16 ನೇ ನಿಮಿಷದಲ್ಲಿ ಗಿರಿ ಮತ್ತೊಂದು ಗೋಲು ಬಾರಿಸುವ ಮೂಲಕ 3-0 ಅಂತರವನ್ನು ಹೆಚ್ಚಿಸಿಕೊಂಡರು. ಧೃತಿಗೆಡೆದ ನ್ಯೂ ಫೈಟರ್ಸ್ ಎಫ್ ಸಿ ಕೂಟುಪರಂಬು ತಂಡದ ಮುನ್ನಡೆ ಆಟಗಾರ ಸೈಮನ್ 1 ಗೋಲುಗಳಿಸುವ ಮೂಲಕ ತಂಡದ ಮೇಲಿದ್ದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಅಂತಿಮವಾಗಿ ಹಾರಿಜಾನ್ ತಂಡ 3-1 ಗೋಲು ಗಳಿಂದ ಜಯಸಾಧಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಫುಟ್ಬಾಲ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಚಾಲಕರ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಹೆಚ್. ಶರೀಫ್, ಬ್ಲೂ ಬಾಯ್ಸ್ ಸಂಘದ ಪದಾಧಿಕಾರಿಗಳು ಕ್ರೀಡಾಪಟುಗಳಿಗೆ ಶುಭ ಹಾರೈಸುವ ಮೂಲಕ ಚಾಲನೆ ನೀಡಿದರು.