ಕೂಡಿಗೆ, ಮೇ 24: ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಿರಂಗಾಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2017-18ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕೆ ದಾಖಲಾತಿ ಆಂದೋಲನ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಮಾತನಾಡಿ, ಶಿರಂಗಾಲ ಕಾಲೇಜು ಸ್ಥಾಪಿತ ವರ್ಷದಿಂದ ಉತ್ತಮ ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ಮಾತ್ರವಲ್ಲದೆ, ಹಾಸನ ಹಾಗೂ ಮೈಸೂರು ಜಿಲ್ಲೆಯ ಗಡಿಭಾಗದಲ್ಲೂ ಹೆಸರುಗಳಿಸಿದೆ. ಪ್ರತಿ ವರ್ಷದಂತೆ 2016-17ನೇ ಸಾಲಿನಲ್ಲೂ ಉತ್ತಮ ಫಲಿತಾಂಶ ಪಡೆದಿದ್ದು, ಐವರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ, ವಾಣಿಜ್ಯ ವಿಭಾಗ ಮತ್ತು ಕಲಾ ವಿಭಾಗದ ಕೋರ್ಸುಗಳು ಇದ್ದು, ವಿದ್ಯಾರ್ಥಿಗಳು ಆಯಾಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಅವಕಾಶಗಳು ಇವೆ. ಪಠ್ಯೇತರ ಚಟುವಟಿಕೆಗಳಲ್ಲೂ ಈ ಕಾಲೇಜು ಕೀರ್ತಿಗಳಿಸಿದ್ದು, ವಿದ್ಯಾರ್ಥಿಗಳು ಹೆಚ್ಚು ದಾಖಲಾತಿ ಪಡೆಯಬೇಕು ಎಂದರು.