*ಗೋಣಿಕೊಪ್ಪಲು, ಮೇ 23: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದÀರ್ಭ ಆಕಸ್ಮಿಕ ವಿದ್ಯುತ್ ಹರಿದು ಕಂಬದ ಮೇಲೆ ಕರುಣಾಜನಕ ವಾಗಿ ಸಾವನ್ನಪ್ಪಿದ ಘಟನೆ ಕೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.ಗೋಣಿಕೊಪ್ಪ ವಿದ್ಯುತ್ ನಿಗಮ ಘಟಕದ ಸಿಬ್ಬಂದಿ ಮೂಲತಃ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದ ನಿವಾಸಿ ರಮೇಶ್ (27) ಮೃತಪಟ್ಟ ವ್ಯಕ್ತಿ. ಕೆಲ ವರ್ಷಗಳಿಂದ ತಿತಿಮತಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಮಂಗಳವಾರ ಬೆಳಿಗ್ಗೆ ಅಧಿಕಾರಿ ಆದೇಶದ ಮೇರೆ ಕೋಣನಕಟ್ಟೆ ಗ್ರಾಮದ ವಿದ್ಯುತ್ ಮಾರ್ಗದ ತಂತಿ ದುರಸ್ತಿ ಮಾಡಲು ಸಹಾಯಕ ಕೃಷ್ಣ ಅವರೊಂದಿಗೆ ತೆರಳಿದ್ದರು.
ರಮೇಶ್ ಹಾಗೂ ಕೃಷ್ಣ ಕೆಲಸ ಬೇಗ ಮುಗಿಸಬೇಕೆಂಬ ಉದ್ದೇಶದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ರಮೇಶ್ ಹತ್ತಿದ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ.
ಸೋಮವಾರ ಸುರಿದ ಮಳೆಗೆ ಗ್ರಾಮದಲ್ಲಿ ಕಂಬಗಳು ನೆಲಕ್ಕುರುಳಿದ್ದವು. ಈ ಸಂದರ್ಭ ವಿದ್ಯುತ್ ಕಡಿತಗೊಳಿಸ ಲಾಗಿತ್ತು. ಮಂಗಳವಾರ ಬೆಳಿಗ್ಗೆ 9.45ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ದುರಸ್ತಿ ಕಾರ್ಯಕ್ಕೆ ಕಂಬದ ಮೇಲೇರಿದ ರಮೇಶ್ಗೆ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ.
ರಮೇಶ್ಗೆ ಕಳೆದ 2 ತಿಂಗಳ ಹಿಂದೆಯಷ್ಟೆ ಮದುವೆ ನಿಶ್ಚಯವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಮದುವೆ ನಡೆಯುವದರಲ್ಲಿತ್ತು ಎಂದು ರಮೇಶ್ನ ಸಹೋದ್ಯೋಗಿ ಸ್ನೇಹಿತರು ತಿಳಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಜು, ಗೋಣಿಕೊಪ್ಪ ಪ್ರಬಾರ ಠಾಣಾಧಿಕಾರಿ ರಾಜು ಭೇಟಿ ನೀಡಿದರು.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಮೃತನ ಕುಟುಂಬದವರು ಬಂದನಂತರ ಮರಣೋತ್ತರ ಪರೀಕ್ಷೆ ನಡೆಸ ಲಾಗುವದು.
ತಿತಿಮತಿ ಗ್ರಾಮದಲ್ಲಿ ಕರ್ತವ್ಯ ದಲ್ಲಿದ್ದ ರಮೇಶ್ ಸ್ಥಳೀಯ ಜನರ ವಿಶ್ವಾಸಗಳಿಸಿದ್ದರು. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಎದುರಾದರೆ ಹೆಚ್ಚಿನ ಆಸಕ್ತಿಯಿಂದ ನಿಬಾಯಿಸುತ್ತಿದ್ದರು. ಪ್ರತಿಯೊಬ್ಬರ ದೂರವಾಣಿ ಕರೆಗೆ ಸ್ಪಂದಿಸುತ್ತಿದ್ದರು. ಇಂತಹ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವದು ತುಂಬಲಾರದ ನಷ್ಟ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಗೋಣಿಕೊಪ್ಪ ವಿದ್ಯುತ್ ಘಟಕದ ಸಿಬ್ಬಂದಿಗಳು ತಿತಿಮತಿ ಸಮೀಪದ ಮಾರಿಗುಡಿ
(ಮೊದಲ ಪುಟದಿಂದ) ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದರು. ಬಹಳಷ್ಟು ಸಿಬ್ಬಂದಿಗಳು ದೇವಸ್ಥಾನದಲ್ಲಿ ಸೇರಿದ್ದು, ಇತರ ಸಹೋದ್ಯೋಗಿ ಮಿತ್ರರ ಆಗಮನಕ್ಕಾಗಿ ಕಾಯುತ್ತಿದ್ದರು. ಆದರೆ ಸಹೋದ್ಯೋಗಿ ರಮೇಶ್ ಕರ್ತವ್ಯ ಸಂದರ್ಭ ಮೃತಪಟ್ಟ ಮಾಹಿತಿಯಿಂದ ಮಿತ್ರರಲ್ಲಿ ಆಘಾತ ಉಂಟು ಮಾಡಿದೆ. ಸ್ನೇಹಿತನನ್ನು ಕಳೆದುಕೊಂಡ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ. - ಎನ್. ಎನ್. ದಿನೇಶ್