ಮಡಿಕೇರಿ, ಮೇ 23: ನಗರದಲ್ಲಿ ನೂತನ ಕಲಾಮಂದಿರ ನಿರ್ಮಾಣಕ್ಕಾಗಿ ರೂ. 8 ಕೋಟಿ, ವಾಹನ ನಿಲುಗಡೆ ಪಾರ್ಕಿಂಗ್ ಮೇಲುಸೇತುವೆ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಮತ್ತಿತರ ನಗರಾಭಿವೃದ್ಧಿಗಾಗಿ ರೂ. 68 ಕೋಟಿ ಬಿಡುಗಡೆ ಮಾಡಬೇಕಾಗಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಲ್ಲಿ ಕಾವೇರಮ್ಮ ಸೋಮಣ್ಣ ಮನವಿ ಮಾಡಿದ್ದಾರೆ.
ಮಡಿಕೇರಿ ನಗರದಲ್ಲಿ ಮಳೆ ಗಾಲದಲ್ಲಿ ರಸ್ತೆಗಳು ಹಾಳಾಗುವದರ ಜೊತೆಗೆ ಮನೆಗಳು ಕುಸಿಯುವ ಹಂತ ತಲಪುತ್ತವೆ. ತಡೆಗೋಡೆ ನಿರ್ಮಾಣಕ್ಕೆ ಅವಕಾಶ ಮಾಡಬೇಕಾಗಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಅವರಿಗೆ ಮನವಿ ಮಾಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ 33,381 ಜನಸಂಖ್ಯೆ ಇದ್ದು, ಪ್ರವಾಸಿ ಕೇಂದ್ರವಾಗಿದೆ. ನಗರದಲ್ಲಿ 8,036 ವಿಸ್ತೀರ್ಣದ ಆಸ್ತಿಯನ್ನು ಹೊಂದಿದ್ದು, ಆಸ್ತಿ ತೆರಿಗೆ, ನಗರದ ಸ್ವಚ್ಛತಾ ಕೆಲಸ, ನೀರಿನ ತೆರಿಗೆ, ನೀರು ಸರಬರಾಜು ಮತ್ತು ಬೀದಿ ದೀಪ ನಿರ್ವಹಣೆ ಹಾಗೂ ದೈನಂದಿನ ಅಗತ್ಯ ವೆಚ್ಚಗಳಿಗಾಗಿ ನಿರ್ವಹಿಸಲು ಅವಶ್ಯಕವಾಗಿದೆ.
ಶೇ. 24.10 ರಷ್ಟು ಮತ್ತು ಶೇ. 7.25 ರಷ್ಟು ಹಾಗೂ ಶೇ. 3 ರಷ್ಟು ವೆಚ್ಚ ಭರಿಸಲು ಸರಿದೂಗಿಸಲಾಗುತ್ತಿದೆ. ನಗರದ ಅಭಿವೃದ್ಧಿ ಕೆಲಸಗಳಿಗೆ ಎಸ್.ಎಫ್.ಸಿ. ಇತರ ಅನುದಾನ ಅವಲಂಭಿಸುವದು ಮಾರ್ಗವಾಗಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ನಗರಸಭೆ ಅಧ್ಯಕ್ಷರು ಕೋರಿದ್ದಾರೆ.
ಮಡಿಕೇರಿ ನಗರಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ನಗರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲದೆ. ರಸ್ತೆ ಬದಿಗಳಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ನಗರದಲ್ಲಿ ಕಿರಿದಾದ ರಸ್ತೆಗಳಿದ್ದು, ವಾಹನ ಅಪಘಾತಗಳು ಸಂಭವಿಸುತ್ತವೆ. ಪಾದ ಚಾರಿಗಳು, ಶಾಲಾ ವಿದ್ಯಾರ್ಥಿಗಳು ಜೀವ ಭಯದಿಂದ ಓಡಾಡಬೇಕಿದೆ.
ಸುಗಮ ಸಾರಿಗೆ ವ್ಯವಸ್ಥೆಗೆ ಅವಕಾಶ ಮಾಡುವದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವದು. ಮತ್ತಿತರ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಹರಿಯುವ ರಾಜ ಕಾಲುವೆ ಬದಿ ರಸ್ತೆ ಕುಸಿಯದ ಹಾಗೆ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ರಾಜ ಕಾಲುವೆಗಳ ಮೇಲೆ ಹಾದು ಹೋಗುವ ರಸ್ತೆಗಳ ಸೇತುವೆಗಳು ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಇವುಗಳ ನಿರ್ಮಾಣ ಆಗಬೇಕಿದೆ. ಮಡಿಕೇರಿ ನಗರದಲ್ಲಿ ಬಹಳ ವರ್ಷದಿಂದ ಕಾವೇರಿ ಕಲಾಕ್ಷೇತ್ರವಿದ್ದು, ಈ ಸಭಾಂಗಣದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು, ವಿವಿಧ ಸಭೆ ಸಮಾರಂಭಗಳು, ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತವೆ. ಈ ಕಟ್ಟಡವು ಶಿಥಿಲಗೊಂಡಿದ್ದು, ಪ್ರತಿ ವರ್ಷ ದುರಸ್ತಿಗಾಗಿ ಹಣ ವ್ಯಯ ಮಾಡಲಾಗುತ್ತದೆ. ಸುಸಜ್ಜಿತ ಕಾವೇರಿ ಕಲಾಕ್ಷೇತ್ರ ನೂತನ ಭವನ ನಿರ್ಮಾಣಕ್ಕೆ ರೂ. 8 ಕೋಟಿ ಹಣ ಬಿಡುಗಡೆ ಮಾಡಬೇಕಾಗಿ ಕಾವೇರಮ್ಮ ಸೋಮಣ್ಣ ಮನವಿ ಮಾಡಿದ್ದಾರೆ.
ರಸ್ತೆ, ವಾಹನ ನಿಲುಗಡೆ, ಮೇಲುಸೇತುವೆ ನಿರ್ಮಾಣ ಇತರ ವೆಚ್ಚಕ್ಕಾಗಿ ಒಟ್ಟು ರೂ. 68 ಕೋಟಿ ಬಿಡುಗಡೆ ಮಾಡಬೇಕಾಗಿ ಮನವಿ ಮಾಡಿದ್ದಾರೆ.
ವಾಹನ ನಿಲುಗಡೆ: ನಗರದ ಓಂಕಾರೇಶ್ವರ ದೇವಸ್ಥಾನ, ಮಾರುಕಟ್ಟೆ ಹತ್ತಿರ ಹಾಗೂ ರಾಜಾಸೀಟು ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವದು, ಖಾಸಗಿ ಬಸ್ ನಿಲ್ದಾಣ ಬಳಿ ಕಾಂಪ್ಲೆಕ್ಸ್ ನಿರ್ಮಾಣ, ಈಗ ಇರುವ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ, ಮೇಲು ಸೇತುವೆ ನಿರ್ಮಾಣ, ಮೈಸೂರು ರಸ್ತೆ ಕನ್ನಂಡಬಾಣೆಯ ಕೆರೆಗಾಗಿ ಮಣಿಯಪಂಡ ಗದ್ದೆ ಭಾಗದ ರಾಜ ಕಾಲುವೆ ಮುಖಾಂತರ ಜೂನಿಯರ್ ಕಾಲೇಜು ರಸ್ತೆ, ನ್ಯೂ ಚಿತ್ರ ಮೇಲ್ಭಾಗದ ರಸ್ತೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕಾಗಿ ಕೈಗಾರಿಕಾ ಪ್ರದೇಶ ಹಾಗೂ ಖಾಸಗಿ ಬಸ್ ನಿಲ್ದಾಣದವರೆಗೆ ಮೇಲು ಸೇತುವೆ ನಿರ್ಮಾಣಕ್ಕಾಗಿ ರೂ. 150 ಕೋಟಿ, ಖಾಸಗಿ ಬಸ್ ನಿಲ್ದಾಣದಿಂದ ಜೂನಿಯರ್ ಕಾಲೇಜು ರಸ್ತೆವರೆಗೆ ಮೇಲು ಸೇತುವೆ ನಿರ್ಮಾಣ, ಡೈರಿ ಫಾರಂ ಹತ್ತಿರ ಇರುವ ಹಾಕಿ ಮೈದಾನದ ಪಕ್ಕದಲ್ಲಿ ಹರಿಯುವ ರಾಜ ಕಾಲುವೆ ಮತ್ತು ಮೇಲಿನಿಂದ ಬರುವ ತೋಡು ಅಂದಾಜು ತಡೆಗೋಡೆಗೆ ರೂ. 50 ಲಕ್ಷ, ಐ.ಟಿ.ಐ. ಜಂಕ್ಷನ್ ಮಿಲ್ ಮುದ್ದಪ್ಪ ಅವರ ಮನೆ ಎದುರು ಇರುವ ತೋಡಿಗೆ ಮತ್ತು ಮೈತ್ರಿ ಹಾಲ್ ಮುಂದೆ ಸುಬ್ರಮಣ್ಯ ನಗರಕ್ಕೆ ಹೋಗುವ ಹಾಲಿ ಇರುವ ಸೇತುವೆ ಶಿಥಿಲಾವಸ್ಥೆಯಲ್ಲಿರುವದರಿಂದ ಇದನ್ನು ಹೊಸದಾಗಿ ನಿರ್ಮಾಣ ಮಾಡುವ ಸಲುವಾಗಿ ಈ 2 ಸೇತುವೆಗಳಿಗೆ ಅಂದಾಜು ವೆಚ್ಚ ರೂ. 1 ಕೋಟಿ. ಮ್ಯಾನ್ಸ್ ಕಾಂಪೌಂಡ್ನಿಂದ ಕನ್ನಂಡಬಾಣೆಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ತೋಡಿಗೆ ಸೇತುವೆ ಅಂದಾಜು ವೆಚ್ಚ ರೂ. 25 ಲಕ್ಷ, ಹಳೆಯ ಅಕ್ಟ್ರಾಯ್ಗೇಟ್ ಹತ್ತಿರ ಸೇತುವೆ ನಿರ್ಮಾಣಕ್ಕೆ ಅಂದಾಜು ವೆಚ್ಚ ರೂ.25 ಲಕ್ಷ. ನಗರದ ಸಂಪಿಗೆ ಕಟ್ಟೆಯಿಂದ ಹಳೆಯ ಆಕ್ಟ್ರಾಯ್ ಗೇಟ್ನಿಂದ ಎ.ವಿ. ಶಾಲೆಯವರೆಗೆ ರಸ್ತೆಯ ವಿಸ್ತರಣೆ, ಹೊಸದಾಗಿ ಡಾಂಬರೀಕರಣ ಅಂದಾಜು ವೆಚ್ಚ ರೂ. 1 ಕೋಟಿ.
ಮಂಗೇರಿರ ಮುತ್ತಣ್ಣ ವೃತ್ತದಿಂದ ಹೊಸ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ರೂ.10 ಕೋಟಿ, ಚರ್ಚ್ ಗೇಟಿನಿಂದ ಗಣಪತಿ ನರ್ಸಿಂಗ್ ಹೋಂವರೆಗೆ ಮೇಲು ಸೇತುವೆ ನಿರ್ಮಾಣಕ್ಕೆ ರೂ. 10 ಕೋಟಿ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ತೋಡಿಗೆ ಸ್ಲಾಬ್ ಹಾಕಲು ರೂ. 5 ಕೋಟಿ, ರಾಜಾಸೀಟ್ ಬಳಿ ಮಣ್ಣು ತೆಗೆದು ಪಾರ್ಕ್ ವ್ಯವಸ್ಥೆ ಮಾಡುವುದಕ್ಕೆ ರೂ. 2 ಕೋಟಿ, ಐ.ಬಿ. ಮುಂಭಾಗ ಮಲ್ಟಿಪರ್ಪಸ್ ಪಾರ್ಕ್, ಗಣಪತಿ ಬೀದಿ ರಸ್ತೆ ಅಗಲೀಕರಣ ಮತ್ತು ಚರಂಡಿ ಕೆಲಸ ರೂ. 1 ಕೋಟಿ, ಕೊಡಗು ಜಿಲ್ಲಾ ಕಾರಾಗೃಹ ರಸ್ತೆ ಅಗಲೀಕರಣ ಮತ್ತು ಚರಂಡಿ ರೂ. 1 ಕೋಟಿ, ಕಾವೇರಿ ಕಲಾಕ್ಷೇತ್ರ ಕಟ್ಟಡ ಸ್ಥಳದಲ್ಲಿ ಭವ್ಯವಾದ ಆಧುನಿಕ ಶೈಲಿಯಲ್ಲಿ ಎಲ್ಲಾ ಅನುಕೂಲತೆ ಇರುವ ಕಲಾಮಂದಿರ ನಿರ್ಮಾಣ ಮಾಡಲು ಅಂದಾಜು ರೂ. 8 ಕೋಟಿ ಮಂಜೂರು ಮಾಡುವಂತೆ ನಗರಸಭೆ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಈ ಸಂದರ್ಭ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಅವರು ಕೂಡಾ ಸಚಿವರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾ ಸದಸ್ಯ ಪೀಟರ್, ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಹಾಜರಿದ್ದರು.