ಮಡಿಕೇರಿ, ಮೇ 23: ಕೊಡಗು ಜಿಲ್ಲೆಯಲ್ಲಿ ಇಲಾಖಾ ಸಿಬ್ಬಂದಿ ಕೊರತೆ ತುಂಬುವದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಂದು ನೂರ ಅರವತ್ತು ಹೊಸ ಮುಖಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸುಳಿವು ನೀಡಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ನೇಮಕಾತಿ ಸಮಿತಿಯು, ಈಗಾಗಲೇ ಉನ್ನತ ಮಟ್ಟದ ಚರ್ಚೆಯೊಂದಿಗೆ ಕೊಡಗಿನ 160 ಮಂದಿಯನ್ನು ಅರ್ಹತೆ ಅನುಸಾರ ಆಯ್ಕೆ ಪಟ್ಟಿ ಸಿದ್ಧಗೊಳಿಸಿದ್ದು, 96 ಮಂದಿ ನಾಗರಿಕ ಪೊಲೀಸ್ ಸೇವೆಗೆ ಹಾಗೂ 40 ಶಸಸ್ತ್ರ ಪೊಲೀಸ್ ಸಿಬ್ಬಂದಿ ಹಾಗೂ 24 ಮಹಿಳಾ ಪೊಲೀಸರನ್ನು ಗುರುತಿಸಿದ್ದಾಗಿದೆ.
ಈ ಅಭ್ಯರ್ಥಿಗಳ ದೇಹದಾಢ್ರ್ಯತೆ, ಆರೋಗ್ಯ ತಪಾಸಣೆ, ಲಿಖಿತ ಹಾಗೂ ಮೌಖಿಕ ಸಂದರ್ಶನ ಮಾಡಿದ್ದು, ನೇಮಕಾತಿ ಸಂಬಂಧ ಹೊಸ ಮುಖಗಳ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ವಾಸ ದೃಢೀಕರಣ ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತಿದೆ
ಮೇಲಿನ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಅರ್ಹ 160 ಮಂದಿಗೆ ಪೊಲೀಸ್ ಇಲಾಖೆಯ ನೇಮಕಾತಿ ಆದೇಶ ಪತ್ರ ನೀಡುವ ಮೂಲಕ ರಾಜ್ಯದ ವಿವಿಧ ಪೊಲೀಸ್ ತರಬೇತಿ ಕೇಂದ್ರಗಳಿಗೆ ಮುಂದಿನ 9 ತಿಂಗಳು ತರಬೇತಿಗಾಗಿ ಕಳುಹಿಸಿಕೊಡಲಾಗುವದು ಎಂದು ಎಸ್ಪಿ ಖಚಿತಪಡಿಸಿದ್ದಾರೆ.
ಈ 160 ಮಂದಿ ತರಬೇತಿಯೊಂದಿಗೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡರೆ, ಇಲಾಖೆಯ ಈಗಿನ ಸಿಬ್ಬಂದಿ ಕೊರತೆ ನಿವಾರಣೆಯೊಂದಿಗೆ ಕಾನೂನು ಪಾಲನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಚಿತ ಸಂಪರ್ಕ ಜಾಲ
ಈಗಾಗಲೇ ಖಾಸಗಿ ಸಂಸ್ಥೆಯೊಂದು ಪೊಲೀಸ್ ಇಲಾಖೆಗೆ ಜಿಲ್ಲೆಯ ಸಿಬ್ಬಂದಿಗಳು ಪರಸ್ಪರ ಮೊಬೈಲ್ ಸಂಪರ್ಕ ಸಾಧಿಸಲು 700 ಸಿಮ್ ಕಾರ್ಡ್ಗಳನ್ನು ಉಚಿತವಾಗಿ ಕಲ್ಪಿಸಿದ್ದು, ರಾಜ್ಯದ ಬಹುತೇಕ ಸಿಬ್ಬಂದಿಗಳು ಪರಸ್ಪರ ಉಚಿತ ಸಂಪರ್ಕ ಸಾಧಿಸಿ ಪರಿಣಾಮಕಾರಿಯಾಗಿ ಅಪರಾಧಗಳ ತಡೆಗಟ್ಟಲು ಕಾರ್ಯೋನ್ಮುಖರಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪೊಲೀಸ್ ಸಾರ್ವಭೌಮ
ಈಗಾಗಲೇ ರಾಜ್ಯದೆಲ್ಲೆಡೆ ಓರ್ವ ಪೊಲೀಸ್ ಸಿಬ್ಬಂದಿಗೆ ನಿರ್ದಿಷ್ಟ ಜನವಸತಿ, ಗ್ರಾಮ, ವಾರ್ಡ್ನಂತೆ ಗಸ್ತು ಕಾರ್ಯವನ್ನು ನಿರ್ದಿಷ್ಟವಾಗಿ ಹಂಚಲಾಗಿದ್ದು, ಜಿಲ್ಲೆಯ ಎಲ್ಲಾ ಠಾಣೆಗಳ ಪ್ರತಿ ಸಿಬ್ಬಂದಿಗೆ ಈ ರೀತಿ ಹೊಣೆಗಾರಿಕೆ ನೀಡಲಾಗಿದ್ದು, ಆಯಾ ಜನವಸತಿಯ ಎಲ್ಲಾ ಕಾರ್ಯಗಳಿಗೆ ಅವರೇ ಸಾರ್ವಭೌಮರಂತೆ ಇರುತ್ತಾರೆ.
ತನ್ನ ಕರ್ತವ್ಯ ವ್ಯಾಪ್ತಿಯಲ್ಲಿ ಯಾರಾದರೂ ಸಮಾಜ ಘಾತುಕರು, ಕೋಮುವಾದಿ ಗೂಂಡಾಗಳು, ದರೋಡೆಕೋರರು, ಚೋರರು, ಇನ್ನು ಮುಂತಾದ ಸಮಾಜದ ಸ್ವಾಸ್ಥ್ಯ ಕೆಡಿಸುವವರಿದ್ದರೆ ಅಂತಹವರ ಬಗ್ಗೆ ಈ ಸಿಬ್ಬಂದಿ ಸಂಪೂರ್ಣ ಮಾಹಿತಿ ಹೊಂದಿದ್ದು, ಕಾಲಕಾಲಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತಿರಬೇಕು.
ಆಯಾ ಪೊಲೀಸರು ಕೆಲಸ ನಿರ್ವಹಿಸುವ ಬಗ್ಗೆ ಸಂಬಂಧಿಸಿದ ಠಾಣೆಗಳ ಓರ್ವ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಗಮನವಿರಿಸಬೇಕು. ಅಂತಹ ಜನವಸತಿಯ ನಾಗರಿಕ ತಂಡ ಪೊಲೀಸರಿಗೆ ಎಲ್ಲಾ ಸಂಗತಿಗಳ ಬಗ್ಗೆ ಸಮಯೋಚಿತ ಮಾಹಿತಿಗಳನ್ನು ತಿಳಿಸುತ್ತಾ, ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಕಾಳಜಿ ತೋರಬೇಕು. ಆ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಯಾವದೇ ಶಾಂತಿ ಭಂಗವಾಗದಂತೆ ನಾಗರಿಕ ಸಮಾಜ ಜಾಗೃತಿಯಿಂದಿರುವಂತೆ ವ್ಯವಸ್ಥೆ ಜಾರಿಯಿರುವದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ‘ಶಕ್ತಿ' ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡರು.