*ಗೋಣಿಕೊಪ್ಪಲು, ಮೇ 23: ತಾಲೂಕು ಕೃಷಿ ಇಲಾಖೆ ವತಿಯಿಂದ ಪೊನ್ನಂಪೇಟೆ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ನಡೆಯಿತು.ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಜಿ.ಪಂ., ತಾಲೂಕು ಕೃಷಿ ಇಲಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಶ್ರಯದಲ್ಲಿ ಹೋಬಳಿ ಮಟ್ಟದ ಕೃಷಿ ಅಭಿಯಾನದ ವಸ್ತು ಪ್ರದರ್ಶನ ಮಳಿಗೆಗಳನ್ನು ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಚಾಲನೆ ನೀಡಿದರು.

ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮಾತನಾಡಿ, ರೈತರಲ್ಲಿ ಕೃಷಿಯ ಬಗ್ಗೆ ಒಲವು ಕಡಿಮೆಯಾಗಿದೆ. ಕೃಷಿಯಲ್ಲಿ ಆರ್ಥಿಕವಾಗಿ ಮುಂದುವರಿಯಲು ಸರಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಕೆರೆಗಳ ಪುನಶ್ಚೇತನ ಕಾರ್ಯ ನಡೆಯಬೇಕಾಗಿದೆ. ಕೃಷಿ ಚಟುವಟಿಕೆಗಳು ಹೆಚ್ಚಾಗಲು ಕೆರೆಗಳ ಅಭಿವೃದ್ಧ್ದಿ ಅವಶ್ಯ ಎಂದರು.

ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಮಾತನಾಡಿ, ಬರಗಾಲದಿಂದ ನೀರಿನ ಅಭಾವ ಎದುರಾಗಿದೆ. ಕೃಷಿ ಗದ್ದೆಗಳನ್ನು ಪಾಳು ಬಿಡುತ್ತಿರುವದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಹೆಚ್ಚು ಕೃಷಿ ಕಾರ್ಯ ಮಾಡಿದರೆ ಅಂತರ್ಜಲ ಹೆಚ್ಚು ಮಾಡಬಹುದು ಎಂದರು.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಮಾತನಾಡಿ, ರೈತರಲ್ಲಿ ಕೃಷಿಯತ್ತ ಹೆಚ್ಚಿನ ಒಲವು ಮೂಡಬೇಕಾಗಿದೆ. ಪಟ್ಟಣಗಳತ್ತ ವಲಸೆ ಹೋಗದೆ ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೂ ಕೈ ಜೋಡಿಸಬಹುದು ಎಂದರು.

ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆಯಲ್ಲಿ ತಾ.ಪಂ. ಸದಸ್ಯ ಪ್ರಕಾಶ್, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿ ರೀನಾ ಕೃಷಿ ಇಲಾಖೆಯ ಸವಲತ್ತುಗಳನ್ನು ಹಾಗೂ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಲಹೆಗಳನ್ನು ನೀಡಿದರು. ‘ವಿಜ್ಞಾನಿಗಳೊಂದಿಗೆ ರೈತರ ಸಂವಾದ’ ಕಾರ್ಯಕ್ರಮ ನಡೆಯಿತು.

ಸುಳುಗೋಡು ಗ್ರಾಮದ ಕೃಷಿಕ ಅಜ್ಜಿಕುಟ್ಟಿರ ಸೂರಜ್ ಮಳೆ ನೀರು ಸಂಗ್ರಹ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಮಹಾವಿದ್ಯಾಲಯದ ಕೀಟ ಮತ್ತು ರೋಗ ಶಾಸ್ತ್ರಜ್ಞ ಡಾ. ಕೆಂಚಾರೆಡ್ಡಿ, ನಬಾರ್ಡ್ ಸಂಸ್ಥೆ ಜಿಲ್ಲಾ ಮಹಾಪ್ರಬಂಧಕ ಎಂ.ಸಿ. ನಾಣಯ್ಯ, ಭತ್ತ ಬೇಸಾಯ ಶಾಸ್ತ್ರಜ್ಞ ಡಾ. ಜಡೇಗೌಡ, ಮಡಿಕೇರಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷ ಡಾ. ರಾಜಶೇಕರ್ ಬಾರಕೆರ, ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ. ರಮೇಶ್ ರೈತರೊಂದಿಗೆ ಸಂವಾದ ನಡೆಸಿದರು.

- ಎನ್.ಎನ್. ದಿನೇಶ್