ಮಡಿಕೇರಿ, ಮೇ 24: ಮಡಿಕೇರಿಯಲ್ಲಿ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕಾಯಿಲೆ ಎಲ್ಲೆಲ್ಲಿ ಕಂಡು ಬಂದಿದೆ ಎಂಬ ಬಗ್ಗೆ ಸರ್ವೆ ನಡೆಸಲಾಗುತ್ತಿದೆ. ಆಜಾದ್ನಗರದಲ್ಲಿ ಈ ಕಾಯಿಲೆ ಹೆಚ್ಚಿನ ಮಂದಿಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಆ ಭಾಗದ ನಗರಸಭಾ ಸದಸ್ಯ ಮನ್ಸೂರ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದು, ಇಂದು ಆಜಾದ್ ನಗರಕ್ಕೆ ತೆರಳಿ ಪರಿಶೀಲಿಸಿದ ಸಂದರ್ಭ 13ಮಂದಿ ಈ ರೋಗದಿಂದ ಪೀಡಿತರಾಗಿರುವ ಬಗ್ಗೆ ಖಚಿತಗೊಂಡಿದೆ. ನಿನ್ನೆ ದಿನ ಜಾಂಡೀಸ್ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಮನ್ಸೂರ್ ಕೂಡಲೇ ನಗರಸಭಾಧ್ಯಕ್ಷರು, ಆಯುಕ್ತರಿಗೆ ಈ ಬಗ್ಗೆ ವಿಷಯ ಮುಟ್ಟಿಸಿದ್ದಾರೆ.
(ಮೊದಲ ಪುಟದಿಂದ) ನಂತರ ಯಾರ್ಯಾರಿಗೆ ಕಾಯಿಲೆ ಬಾಧಿಸಲ್ಪಟ್ಟಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನಿಶಿಕಾ, ಅಫಾನ್, ಹ್ಯಾಸಿರ್, ನಿಸಾರ್, ಮುಫಿದಾ, ಸಹದಿಯಾ, ಇಮ್ರಾನ್, ವಹಿದ್, ಆಸಿರ, ಸಹ್ದಾ, ಹನಾನ್, ರೈದಾ, ಕಾವ್ಯ ಎಂಬವರುಗಳು ರೋಗಕ್ಕೆ ತುತ್ತಾಗಿರುವ ಬಗ್ಗೆ ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆಯಿಂದ ಇಂದು ಆಜಾದ್ ನಗರದ ಮನೆ ಮನೆ ದಾದಿಯರು ಭೇಟಿ ನೀಡಿ ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಯ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಆರೋಗ್ಯ ಇಲಾಖೆಯಿಂದ ತಂಡವೊಂದನ್ನು ರಚಿಸಲಾಗಿದ್ದು, ಈ ತಂಡ ಆ ಭಾಗದಲ್ಲಿ ನೀರನ್ನು ಪರೀಕ್ಷೆಗೊಳಪಡಿಸಿ ನೀರಿನಿಂದ ಜಾಂಡೀಸ್ ಬಂದಿದೆಯಾ ಇಲ್ಲವೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ರೋಗಿಗಳ ರಕ್ತವನ್ನು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀರಂಗಪ್ಪ ‘ಶಕ್ತಿ’ಗೆ ಮಾಹಿತಿ ನೀಡಿದರು. ಕಾಯಿಲೆ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವದಾಗಿಯೂ ಅವರು ಹೇಳಿದರು. ನಗರಸಭೆಯಿಂದ ಪ್ರಸ್ತುತ ನೀರನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ನಗರವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ನಿರಂತರ ಕೈಗೊಳ್ಳಲಾಗುತ್ತಿದೆ. ಇದೀಗ ಜಾಂಡೀಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೀರನ್ನು ಪರೀಕ್ಷೆಗೆ ಕೊಂಡೊಯ್ದಿದ್ದು, ಪರೀಕ್ಷೆ ವರದಿ ಬಂದ ಬಳಿಕ ವರದಿಯನ್ನಾಧರಿಸಿ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ನಗರಸಭಾ ಆಯುಕ್ತೆ ಶುಭಾ ‘ಶಕ್ತಿ’ಗೆ ಮಾಹಿತಿ ನೀಡಿದರು.