ಗೋಣಿಕೊಪ್ಪಲು, ಮೇ 24: ಮಳೆ ಬಂತೆಂದರೆ ನೀರೆಲ್ಲಾ ಶಾಲಾ ಕೊಠಡಿಯೊಳಗೆ! ಬಿರುಗಾಳಿ-ಮಳೆ ಬಂತೆಂದರೆ ಎಲ್ಲಿ ಮೇಲ್ಛಾವಣಿ ಕುಸಿದು ಪುಟ್ಟ ಕಂದಮ್ಮಗಳ ತಲೆಯ ಮೇಲೆ ಬೀಳಲಿದೆಯೋ ಎಂಬ ಭಯ. ಅಷ್ಟಕ್ಕೂ ಇದು ನಿನ್ನೆ ಮೊನ್ನೆಯ ಕಟ್ಟಡವಲ್ಲ. ಸುಮಾರು 35 ವರ್ಷದ ಹಳೆಯ ಕಟ್ಟಡ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆ ಇತ್ತ ಮುಖಮಾಡದೇ ವರ್ಷವೇ ಕಳೆದಿದೆ.

ಮುಂಗಾರು ಮಳೆ ಬೇಗನೆ ಕೊಡಗು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತಿದೆ. ಆದರೆ, ಅಂಗನವಾಡಿ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳು ಇತ್ತ ಮುಖಮಾಡುವ ಯಾವ ಸೂಚನೆಯೂ ಕಾಣುತ್ತಿಲ್ಲ. ಇದು ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಕೊಟ್ಟಗೇರಿ ಅಂಗನವಾಡಿ ದುಸ್ಥಿತಿ.

ಇಲ್ಲಿನ ಅಂಗನವಾಡಿಯಲ್ಲಿ ವರ್ಷಂಪ್ರತಿ ಸುಮಾರು 15-20 ಮಕ್ಕಳು ದಾಖಲಾಗುತ್ತಿದ್ದಾರೆ. ಸಮೀಪದ ಕೊಠಡಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಕೊಠಡಿ ಇದೆ. ಗರ್ಭಿಣಿಯರು, ಕಿಶೋರಿಯರು ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯವನ್ನು ಗಮನಿಸುವ ಚುಚ್ಚುಮದ್ದು, ಔಷಧಿ ವಿತರಣೆಯ ಹೊಣೆ ಹೊತ್ತಿದ್ದಾರೆ. ಆದರೆ, ಇವರಿಗೂ ಮೇಲ್ಛಾವಣಿ ಕುಸಿಯುವ ಭಯ ಎದುರಾಗಿದೆ. ಕಳೆದ ಒಂದು ವರ್ಷದಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸುಜಾತ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯಾಗಿ ಸಿ.ಸಿ. ಮುತ್ತಮ್ಮ, ಸಹಾಯಕಿಯಾಗಿ ಸಚಿತ ಎಂಬವರು ಕೆಲಸ ಮಾಡುತ್ತಿದ್ದು ‘ಶಕ್ತಿ’ ಪ್ರಶ್ನಿಸಿದಾಗ ತಮ್ಮ ಅಸಹಾಯಕತೆ, ಭಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಗ್ರಾ.ಪಂ.ಅಧ್ಯಕ್ಷ ಅರಮಣಮಾಡ ಸತೀಶ್ ದೇವಯ್ಯ ಅವರು ಮಳೆಗಾಲಕ್ಕೂ ಮುನ್ನ ದುರಸ್ತಿ ಕಾರ್ಯ ನಡೆಸಿ ಮುಂದಾಗುವ ಅನಾಹುತ ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಗ್ರಾಮಸ್ಥ ವಿ.ಪಿ. ಈರಪ್ಪ ಅವರು ಅಂಗನವಾಡಿ ದುಸ್ಥಿತಿ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಟಿ.ಎಲ್. ಶ್ರೀನಿವಾಸ್