ಕುಶಾಲನಗರ, ಮೇ 24: ಕೆಲವು ತಿಂಗಳುಗಳ ಹಿಂದೆ ಅಗ್ನಿಗೆ ಆಹುತಿಯಾದ ಅತ್ತೂರು, ಆನೆಕಾಡು ಮೀಸಲು ಅರಣ್ಯ ಇದೀಗ ಚಿಗುರೊಡೆದು ಸಹಜ ಸ್ಥಿತಿಗೆ ಮರಳುತ್ತಿದೆ.
ಮಳೆಯ ಬೆನ್ನಲ್ಲೇ ಅರಣ್ಯ ಬಹುತೇಕ ಹಸಿರಿನತ್ತ ಮರಳುತ್ತಿದ್ದು, ಮರ-ಗಿಡಗಳು ಚಿಗುರೊಡೆಯಲು ಪ್ರಾರಂಭಗೊಂಡಿದೆ. ಕುಶಾಲ ನಗರದಿಂದ ಮಡಿಕೇರಿಗೆ ತೆರಳುವ ಹೆದ್ದಾರಿಯ ಎರಡೂ ಬದಿಗಳಲ್ಲಿ ಅರಣ್ಯ ಸಂಪೂರ್ಣ ಸುಟ್ಟು ಹೋಗಿ ಪ್ರಾಣಿ-ಪಕ್ಷಿಗಳಿಗೆ ನೆಲೆ ಇಲ್ಲದೆ ಬರಡಾಗಿದ್ದ ದೃಶ್ಯ ಗೋಚರಿಸುತ್ತಿತ್ತು.
ಇದೀಗ ಬಹುತೇಕ ಮರಗಳಲ್ಲಿ ಹಸಿರು ಕಾಣತೊಡಗಿದ್ದು, ಪಕ್ಷಿ ಪ್ರಾಣಿಗಳಿಗೆ ನೆಲೆ ಕಲ್ಪಿಸುವ ಸ್ಥಿತಿ ಗೋಚರಿಸಿದೆ.
ಈ ನಡುವೆ ಅರಣ್ಯ ಇಲಾಖೆ ಬೆಂಕಿಗೆ ಆಹುತಿಯಾಗಿರುವ ಅರಣ್ಯದ ಬಹುತೇಕ ಪ್ರದೇಶಗಳನ್ನು ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡಲು ಕ್ರಮಕೈಗೊಂಡಿದೆ.
ಕಾಡಿನ ನಡುವೆ ಹಲವು ಮರಗಳ ಬೀಜಗಳನ್ನು ಬಿತ್ತುವ ಮೂಲಕ ಅರಣ್ಯದ ಪುನಶ್ಚೇತನ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ.
ಅರಣ್ಯದ ಒಳಭಾಗದಲ್ಲಿ ಪ್ರಾಣಿಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಕೆರೆಗಳನ್ನು ನಿರ್ಮಾಣ ಮಾಡುವದು, ಸಂಘ-ಸಂಸ್ಥೆಗಳ ನೆರವಿನೊಂದಿಗೆ ಎಲ್ಲೆಡೆ ಮರಗಳ ಬೀಜಗಳನ್ನು ಬಿತ್ತುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿರುವ ಸೂರ್ಯಸೇನ್, ಈಗಾಗಲೇ ಬೆಂಗಳೂರು ಮತ್ತಿತರ ಸ್ಥಳಗಳಿಂದ ಸ್ವಯಂ ಸೇವಕರು ಈ ನಿಟ್ಟಿನಲ್ಲಿ ಕೈಜೋಡಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಒದಗಿಸಿದ್ದಾರೆ.
ಜೂನ್ 5 ರ ವಿಶ್ವ ಪರಿಸರ ದಿನಾಚರಣೆ ಸಂದರ್ಭ ಸ್ವಚ್ಛ ಪರಿಸರಕ್ಕಾಗಿ ಮಡಿಕೇರಿಯಿಂದ ಕುಶಾಲನಗರ ತನಕ ಆಯೋಜಿಸಿರುವ ಮ್ಯಾರಥಾನ್ ಕಾರ್ಯಕ್ರಮ ಸಂದರ್ಭ ಅತ್ತೂರು ಮತ್ತು ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆಯ ಸಹಯೋಗದೊಂದಿಗೆ ಲಕ್ಷಾಂತರ ಬೀಜಗಳನ್ನು ಬಿತ್ತುವ ಮೂಲಕ ಅರಣ್ಯೀಕರಣಕ್ಕೆ ಕೈಜೋಡಿಸ ಲಾಗುವದು ಎಂದು ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.
- ಸಿಂಚು