ಸೋಮವಾರಪೇಟೆ,ಮೇ.23: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದರಿಂದ ಬಡವರಿಗೂ ವೈದ್ಯರ ಸೇವೆ ಲಭ್ಯವಾಗುವದರೊಂದಿಗೆ ಬಡವರ ಮಕ್ಕಳೂ ವೈದ್ಯರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಬಾಣೆಗೆ ಭೇಟಿ ನೀಡಿ, ಗ್ರಾಮಸ್ಥರನ್ನುದ್ಧೇಶಿಸಿ ಮಾತನಾಡಿದ ಅವರು, ಈ ಹಿಂದೆ ಯಾವದಾದರೂ ಆರೋಗ್ಯದ ಸಮಸ್ಯೆ ಎದುರಾದಾಗ ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಹೊರ ಜಿಲ್ಲೆಗಳನ್ನು ಆಶ್ರಯಿಸಬೇಕಿತ್ತು. ಆದರೆ ಬಿಜೆಪಿ ಸರಕಾರದ ಕೂಸಾದ ಕೊಡಗು ಮೆಡಿಕಲ್ ಕಾಲೇಜು ತೆರೆದಿದ್ದರಿಂದ ಅಲ್ಲಿ ವಿವಿಧ ಸಮಸ್ಯೆಗಳಿಗೆ

(ಮೊದಲ ಪುಟದಿಂದ) ಸಂಬಂಧಿಸಿದಂತೆ ಸುಮಾರು 163 ವೈದ್ಯರುಗಳು ಸೇವೆಯಲ್ಲಿದ್ದಾರೆ. ಇದು ಬಡವರೂ ಸೇರಿದಂತೆ ರೋಗಿಗಳಿಗೆ ವರದಾನವಾಗಿದೆ ಎಂದರು.

ಇಲ್ಲಿರುವ ವೈದ್ಯರುಗಳ ಸಂಖ್ಯೆ ಮುಂದಿನ ವರ್ಷಕ್ಕೆ ಸುಮಾರು 200ಕ್ಕೆ ತಲುಪಲಿದ್ದು, ಮುಂದಿನ 5 ವರ್ಷದಲ್ಲಿ ಸುಮಾರು 500ಕ್ಕೆ ತಲುಪಲಿದೆ. ಮಾತ್ರವಲ್ಲ, ತಾಂತ್ರಿಕ ವಿಭಾಗ ಸೇರಿದಂತೆ ಸುಮಾರು ಒಂದು ಸಾವಿರ ಸಿಬ್ಬಂದಿಗಳು ಲಭ್ಯವಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಕೆಂಚಮ್ಮನಬಾಣೆಯಲ್ಲಿ ವಾಸವಿರುವ ಬಹುತೇಕ ಕುಟುಂಬಗಳು ಕೂಲಿ ಕಾರ್ಮಿಕರಾಗಿದ್ದು, ಅವರುಗಳ ಸಮಸ್ಯೆಗಳಿಗೆ ಸ್ಪಂದಿಸುವದಾಗಿ ತಿಳಿಸಿದ ಶಾಸಕರು, ತಮ್ಮ ಅನುದಾನದಲ್ಲಿ ರೂ 5 ಲಕ್ಷವನ್ನು ಇಲ್ಲಿನ ಕಾಲೋನಿ ರಸ್ತೆಯ ಅಭಿವೃದ್ಧಿಗಾಗಿ ನೀಡುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಬೇಳೂರು ಗ್ರಾ.ಪಂ. ಮಾಜಿ ಸದಸ್ಯ ಜಿ. ಮಧು ಮಾತನಾಡಿ, ಬಹಳಷ್ಟು ಕೂಲಿ ಕಾರ್ಮಿಕರಿರುವ ಕೆಂಚಮ್ಮನಬಾಣೆಯಲ್ಲಿ ಸ್ಮಶಾನದ ಸಮಸ್ಯೆ ಇದೆ. ಇದಕ್ಕಾಗಿ ಜಾಗವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ನೀಗಿಲ್ಲ. ಗ್ರಾಮಕ್ಕೆ ಚಿತಾಗಾರದ ಅವಶ್ಯಕತೆ ಇದೆ. ಬಹುತೇಕ ಕೂಲಿ ಕಾರ್ಮಿಕರೇ ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಆಶ್ರಯ ಯೋಜನೆಯಡಿಯಲ್ಲಿ ಕೇವಲ ಪ.ಜಾತಿ, ಪ.ಪಂ.ವನ್ನೇ ಆಯ್ಕೆ ಮಾಡುತ್ತಿರುವದರಿಂದ ಉಳಿದ ಜಾತಿಯವರು ಮನೆ ನಿರ್ಮಿಸಿಕೊಳ್ಳಲಾಗುತ್ತಿಲ್ಲ ಎಂದು ಸಮಸ್ಯೆಗಳನ್ನು ಹೇಳಿದರು.

ಈ ಸಂದರ್ಭ ಗ್ರಾಮದ ಪ್ರಮುಖರುಗಳಾದ ವಸಂತ ಪೂಜಾರಿ, ಗೋವಿನಮನೆ ಸುಬ್ಬಯ್ಯ, ಬೆಂಜಮಿನ್ ಫರ್ನಾಂಡೀಸ್ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.