ಮಡಿಕೇರಿ, ಮೇ 23: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಯೋಜನೆ ಸಂಬಂಧಿಸಿದಂತೆ ನಿಗದಿ ಮಾಡಲಾಗಿರುವ ಗುರಿಯ ಪ್ರಗತಿ ಸಾಧಿಸುವಂತೆ ಗ್ರಾ.ಪಂ. ಪಿಡಿಓಗಳಿಗೆ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಸೂಚನೆ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ವಸತಿ ಯೋಜನೆ, ನರೇಗಾ ಹಾಗೂ ವಿವಿಧ ಯೋಜನೆ ಪ್ರಗತಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು. ವಸತಿ ಯೋಜನೆಯಡಿ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಗ್ರಾ.ಪಂ.ಗಳಿಗೆ ನೀಡಲಾಗಿರುವ ಗುರಿಯ ಪ್ರಗತಿ ಸಾಧಿಸಬೇಕು. ಯಾವದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಚಾರುಲತಾ ಸೋಮಲ್ ನಿರ್ದೇಶನ ನೀಡಿದರು.

ಹಳೇ ಯೋಜನೆಗಳು ಸೇರಿದಂತೆ ಹೊಸ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಪಿಡಿಓಗಳು ವಿಶೇಷ ಕಾಳಜಿ ವಹಿಸಿ ವಸತಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಓ ನಿರ್ದೇಶನ ನೀಡಿದರು.

ವಸತಿ ಯೋಜನೆ ಸಂಬಂಧಿಸಿದಂತೆ ಅರ್ಹರು ಲಭ್ಯವಾಗದಿದ್ದಲ್ಲಿ ಹತ್ತಿರದ ಗ್ರಾ.ಪಂ.ಯಲ್ಲಿ ಬೇಡಿಕೆ ಇದ್ದಲ್ಲಿ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನವಾಗುವ ವಸತಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳ ಬಗ್ಗೆ ತಾ.ಪಂ.ಇಓಗಳು ವಾರಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಪಿಡಿಓಗಳ ಜೊತೆ ಸಭೆ ನಡೆಸಿ ಪ್ರಗತಿ ಸಾಧಿಸಲು ಮುಂದಾಗಬೇಕು. ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಜಿ.ಪಂ. ಸಿಇಓ ಸಲಹೆ ಮಾಡಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾಬ್‍ಕಾರ್ಡ್ ವಿತರಣೆ, ಆಧಾರ್ ಜೋಡಣೆ ಮತ್ತಿತರ ಕಾರ್ಯ ಮಾಡಬೇಕು. ತಮ್ಮ ಗ್ರಾ.ಪಂ.ಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಿಡಿಓಗಳಲ್ಲಿ ಇರಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜೂನ್ ಅಂತ್ಯಕ್ಕೆ ಶೇ. 40 ರಷ್ಟು ಪ್ರಗತಿ ಸಾಧಿಸುವಂತೆ ಹಾಗೂ ಡಿಆರ್.ಡಿ.ಎ. ಕೋಶದ ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ ಮಾತನಾಡಿ, ಸರ್ಕಾರ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದು, 18 ರಿಂದ 35 ವರ್ಷದೊಳಗಿನ ಯುವಜನರಿಗೆ ಸ್ವ ಉದ್ಯೋಗ ಕಲ್ಪಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ನಿರುದ್ಯೋಗಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ತಾಲೂಕು ಮಟ್ಟದಲ್ಲಿ ಈಗಾಗಲೇ ಅವಕಾಶ ಮಾಡಲಾಗಿದೆ. ತಮ್ಮ ಹಂತದಲ್ಲಿ ಇನ್ನಷ್ಟು ಮಾಹಿತಿ ಒದಗಿಸುವಂತೆ ಪಿಡಿಓಗಳಿಗೆ ಸಲಹೆ ನೀಡಿದರು.

ತಾ.ಪಂ. ಇಓಗಳಾದ ಪಡ್ನೇಕರ್, ಜೀವನ್ ಕುಮಾರ್, ಸುನೀಲ್ ಅವರು ತಮ್ಮ ವ್ಯಾಪ್ತಿಯಲ್ಲಿ ವಸತಿ ಯೋಜನೆ, ನರೇಗಾ ಪ್ರಗತಿ, ಸ್ವಚ್ಚ ಭಾರತ್ ಅಭಿಯಾನ ಇತರ ಕಾರ್ಯಕ್ರಮಗಳ ಪ್ರಗತಿ ಸಂಬಂಧ ಹಲವು ಮಾಹಿತಿ ನೀಡಿದರು.

ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸತ್ಯನ್, ಉಪ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಜಿಲ್ಲೆಯ ಗ್ರಾ.ಪಂ.ಗಳ ಪಿಡಿಓಗಳು ಹಲವು ಮಾಹಿತಿ ನೀಡಿದರು.