ಆಲೂರು-ಸಿದ್ದಾಪುರ, ಮೇ 23: ‘ಶಿಕ್ಷಣ ಮತ್ತು ಪರಿಸರ ಸ್ವಚ್ಛತೆಯಿಂದ ಡೆಂಗ್ಯೂಗಳಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ’ ಎಂದು ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಪಾರ್ವತಿ ಅಭಿಪ್ರಾಯಪಟ್ಟರು. ಅವರು ಸಮೀಪದ ಗಣಗೂರು ಗ್ರಾ.ಪಂ.ಗೆ ಸೇರಿದ ಬಾಣವಾರ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಆರೋಗ್ಯ ಇಲಾಖೆ ಯಿಂದ ಹಮ್ಮಿಕೊಂಡಿದ್ದ ಡೆಂಗ್ಯೂ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಮಾತನಾಡಿ, ಪ್ರತಿಯೊಬ್ಬರು ವಿದ್ಯಾವಂತ ರಾಗಬೇಕು, ಶಿಕ್ಷಣದಿಂದ ಆರೋಗ್ಯದ ಬಗ್ಗೆ ಅರಿವು ಮೂಡುತ್ತದೆ, ಆರೋಗ್ಯ ಶಿಕ್ಷಣದ ಅರಿವು ಹೊಂದಿದರೆ ಡೆಂಗ್ಯೂ, ಚಿಕೂನ್‍ಗುನ್ಯ ಮುಂತಾದ ಸಾಂಕ್ರಾಮಿಕ ರೋಗಗಳು, ಅವುಗಳ ಲಕ್ಷಣ, ರೋಗಗಳನ್ನು ಹರಡುವ ಸೊಳ್ಳೆಗಳು ಹಾಗೂ ರೋಗಗಳನ್ನು ತಡೆಗಟ್ಟುವ ಬಗ್ಗೆ ಅರಿವು ಹೊಂದುವ ಮೂಲಕ ಜನರನ್ನು ಜಾಗೃತಿಗೊಳಿಸಿದರೆ ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಗೊಳಿಸಲು ಸಾಧ್ಯ ಇದೆ ಎಂದರು.

ಈ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಬಾಣವಾರ ಗ್ರಾಮದಲ್ಲಿರುವ 89 ಮನೆಗಳಿಗೆ ತೆರಳಿ ಡೆಂಗ್ಯೂ ರೋಗದ ಬಗ್ಗೆ ಅರಿವು ಸೇರಿದಂತೆ ಸಾಂಕ್ರಾಮಿಕ ರೋಗದ ಲಕ್ಷಣ ಕುರಿತು ಸಮೀಕ್ಷೆ ನಡೆಸಿದರು.

ಈ ಸಂದರ್ಭ ಬಾಣವಾರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಬಿ.ಕೆ. ಪಾರ್ವತಿ ಅವರ ಮನೆಗೆ ತೆರಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬಕ್ಕೆ ಇಲಾಖೆಯಿಂದ ಆರ್ಥಿಕ ಸಹಾಯ ಮತ್ತು ನಿಧನರಾದ ಆಶಾ ಕಾರ್ಯಕರ್ತೆಯ ಪುತ್ರಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡುವದಾಗಿ ಭರವಸೆ ನೀಡಿದರು.

ಈ ಸಂದರ್ಭ ತಾಲೂಕು ಹಿರಿಯ ಆರೋಗ್ಯ ಸಹಾಯಕಿ ಹೆಚ್.ಎಂ. ದಮಯಂತಿ, ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಸ್.ಬಿ. ಶಿವಪ್ರಕಾಶ್, ಕೆ.ಪಿ. ಮಹೇಶ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪಿ.ಪಿ. ನಮಿತ, ತಾಲೂಕು ಆಶಾ ಮೇಲ್ವಿಚಾರಕಿ ರಮ್ಯ ಇದ್ದರು.