ಮಡಿಕೇರಿ, ಮೇ 25: ಆ್ಯಕ್ಸಿಸ್ ಬ್ಯಾಂಕ್ ಹಣ ರೂ. 7.50 ಕೋಟಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸಾಗಿಸುವ ವೇಳೆ ದೋಚಿ ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಗರಣ ಸಂಬಂಧ ಮತ್ತೆ ಇಬ್ಬರ ಬಂಧನದೊಂದಿಗೆ, ಒಟ್ಟು ಐವರು ಸೆರೆ ಸಿಕ್ಕಿದ್ದಾರೆ.ಇಡೀ ಹಗರಣದ ಸೂತ್ರಧಾರಿಯೆನ್ನಲಾದ ಟಿ.ಎ. ಭೀಮಯ್ಯ ಹಾಗೂ ಆತನ ಕಿರಿಯ ಸಹೋದರ ಟಿ.ಎ. ಉತ್ತಪ್ಪ ಮತ್ತು (ಮೊದಲ ಪುಟದಿಂದ) ಟಿ.ಪಿ. ಬಸಪ್ಪನಿಗೆ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿರುವ ಆರೋಪ ಮೇರೆಗೆ, ಸೂರ್ಲಬ್ಬಿ ನಿವಾಸಿ ಮನುಕುಮಾರ್ ಹಾಗೂ ಕೆ. ರವಿ ಎಂಬಿಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಟಿ.ಎ. ಪೂವಣ್ಣ, ಕಾಶಿ ಕಾರ್ಯಪ್ಪ ಹಾಗೂ ಕರಿಬಸಪ್ಪ ಬಂಧಿಸಲ್ಪಟ್ಟಿದ್ದು, ಮನು ಮತ್ತು ರವಿ ಬಂಧನದಿಂದ ಸೆರೆಸಿಕ್ಕ ಆರೋಪಿಗಳ ಸಂಖ್ಯೆ ಐದಕ್ಕೆ ಏರಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ 3ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾಧಿಕಾರಿಯಾಗಿರುವ ಎಸಿಪಿ ಶೃತಿ ಖಚಿತಪಡಿಸಿದ್ದಾರೆ. ಅಲ್ಲದೆ ತಲೆಮರೆಸಿಕೊಂಡವರಿಗಾಗಿ ಇನ್ಸ್‍ಪೆಕ್ಟರ್ ರವೀಶ ನಾಯಕ ತಂಡ ಶೋಧ ಮುಂದುವರಿಸಿದ್ದಾರೆ.