ವೀರಾಜಪೇಟೆ, ಮೇ 25: ಕೊಡಗಿನಲ್ಲಿ ಪರಂಪರಾಗತವಾಗಿ ಬಂದಿರುವ ಜಮ್ಮಾ ಜಾಗದ ಹಕ್ಕು, ಕೊಡವರ ಕೋವಿ ಹಕ್ಕಿನ ಕುರಿತು ಪದೇ ಪದೇ ಗೊಂದಲ ಮೂಡಿ ಸುವದು, ಇದನ್ನು ಪ್ರಶ್ನಿಸುವಂತಹ ಬೆಳವಣಿಗೆ ಸರಿಯಲ್ಲ. ಇಂತಹ ವಿಚಾರದ ಕುರಿತು ಒಗ್ಗಟ್ಟಿನಿಂದ ಎದ್ದುನಿಂತು ಪ್ರಶ್ನಿಸಬೇಕಾಗುತ್ತದೆ ಎಂಬ ಅಂಶ ಇಂದು ನಡೆದ ಅಖಿಲ ಕೊಡವ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಪ್ರಸ್ತಾಪಗೊಂಡಿತು.
ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.ಅನಾದಿ ಕಾಲದಿಂದಲೂ ಬಂದಿರುವ ಜಮ್ಮಾ ಜಾಗಕ್ಕೆ ಪೂರ್ಣ ಹಕ್ಕು ನೀಡಲು ಕಾನೂನಾತ್ಮಕವಾಗಿ ದೃಢ ತೀರ್ಮಾನ ಇನ್ನೂ ಆಗಿಲ್ಲ. ಇದರೊಂದಿಗೆ ಪಾರಂಪರಿಕವಾಗಿ ಬಂದಿರುವ ಕೋವಿ ವಿನಾಯಿತಿಯ ಕುರಿತು ಆಗಾಗ್ಗೆ ಹಲವು ರೀತಿಯಲ್ಲಿ ಪ್ರಶ್ನಿಸುವದನ್ನು ವಿರೋಧಿಸಬೇಕಾಗಿದೆ. ಇಂತಹ ಸಂದರ್ಭ ಎದುರಾದಾಗ ತಕ್ಷಣವೇ ಇದನ್ನು ವಿರೋಧಿಸ ಬೇಕೆಂದು ನಿರ್ಣಯಿಸಲಾಯಿತು.
ಕಸ್ತೂರಿ ರಂಗನ್ ವರದಿಯ ಕುರಿತು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಈ ಕುರಿತು ಪರ-ವಿರೋಧ ನಿಲುವು ಕೇಳಿ ಬರುತ್ತಿದೆ. ಆದರೆ ಈಗಿನ ವರದಿ ಕಾನೂನಾಗಿ ಜಾರಿಗೆ ಬರುವಾಗ ಇದರಿಂದ ಖಂಡಿತವಾಗಿಯೂ ತೊಂದರೆ ಬರಲಿದೆ. ಈಗಿನ ಅಧಿಸೂಚನೆಯಲ್ಲಿ ಮುಂದಿನ ಕಾನೂನಿನ ಅಂಶಗಳ ಕುರಿತು ಸ್ಪಷ್ಟತೆ ಇಲ್ಲ. ಯಾವ ರೀತಿಯ ಕಾನೂನನ್ನು ಅನುಷ್ಠಾನಕ್ಕೆ ತರಲಾಗುವದು. ಇದನ್ನು ಯಾರು ಮಾಡುತ್ತಾರೆ, ಯಾರಿಗೆ ಅಧಿಕಾರ ಎಂಬದನ್ನು ಮೊದಲು ಸ್ಪಷ್ಟಪಡಿಸಬೇಕಿದ್ದು,
(ಮೊದಲ ಪುಟದಿಂದ) ಇದರ ಮೇಲೆ ಚರ್ಚೆ ನಡೆದು ತೀರ್ಮಾನವಾಗಲಿ ಎಂಬ ಅಭಿಪ್ರಾಯ ಕೇಳಿಬಂದಿತು.
ಜಿಲ್ಲೆಯಲ್ಲಿ ರಾಜಕೀಯ ಬದ್ಧತೆ ಕಂಡುಬರುತ್ತಿಲ್ಲ. ಇದರಿಂದ ದೃಢ ತೀರ್ಮಾನಗಳು ಆಗುತ್ತಿಲ್ಲ. ಕೊಡವರ ಮೇಲೆ ಅಪಪ್ರಚಾರಗಳೂ ನಡೆಯುತ್ತಿವೆ. ಸ್ವಾಭಿಮಾನಕ್ಕೆ ಧಕ್ಕೆ ತರುವದು, ಅಸ್ತಿತ್ವದ ಕುರಿತು ತೊಂದರೆ ಮಾಡುವದರ ವಿರುದ್ಧ ಎಚ್ಚೆತ್ತುಕೊಂಡು ಕೊಡಗಿನ ರಕ್ಷಣೆಗೆ ಕಟಿಬದ್ದರಾಗಿರಬೇಕು ಎಂಬ ಕುರಿತು ಚರ್ಚೆ ನಡೆಯಿತು.
ಇಂದಿನ ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟ (ಫೆಡರೇಶನ್ ಆಫ್ ಕೊಡವ ಸಮಾಜಾಸ್)ದ ಬಗ್ಗೆ ವಿವಿಧ ಕೊಡವ ಸಮಾಜದ ಪ್ರತಿನಿಧಿಗಳಿಂದ ಅಸಮಾಧಾನ ಸ್ಪೋಟಗೊಂಡಿದ್ದು ವಿಶೇಷವಾಗಿತ್ತು. ತೂಕ್‍ಬೊಳಕ್ ಪತ್ರಿಕೆಯ ಸಂಪಾದಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ಫೆಡರೇಷನ್‍ನಲ್ಲಿ ಹಲವು ಸಮಸ್ಯೆ ಎದುರಾಗುತ್ತಿದೆ ಎಂಬ ಕುರಿತು ಮಂಡಿಸಿದ್ದ ಠರಾವಿನ ಕುರಿತು ಚರ್ಚೆ ಸಂದರ್ಭ ಅಸಮಾಧಾನದ ಮಾತುಗಳು ಕೇಳಿಬಂದಿತು. ಜನಸಾಮಾನ್ಯರಿಗೆ ಇಲ್ಲಿ ಪ್ರಯೋಜನವಾಗುತ್ತಿಲ್ಲ. ಕೆಲವರ ಹಿಡಿತದಲ್ಲಿ ಕೇಂದ್ರವನ್ನು ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಈ ಬಗ್ಗೆ ಅಖಿಲ ಕೊಡವ ಸಮಾಜದ ಮೂಲಕ ಒಕ್ಕೂಟದ ಗಮನಕ್ಕೆ ತರಬೇಕೆಂದು ಹಲವರು ಒತ್ತಾಯಿಸಿದರು.
ಮೂಲ ನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆ
ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ಕೊಡವರು ಸೇರಿದಂತೆ ಕೊಡಗಿನ ಮೂಲ ನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಜೀತಪದ್ಧತಿ ಎಂಬಿತ್ಯಾದಿ ರೀತಿಯಲ್ಲಿ ಅಪಪ್ರಚಾರಗಳು ನಡೆಯುತ್ತಿದೆ. ಕೊಡವರು ಮಾತ್ರವಲ್ಲ ಇತರ ಮೂಲ ನಿವಾಸಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕೊಡಗಿನ ರಕ್ಷಣೆಗೆ ಕಟಿಬದ್ಧರಾಗಬೇಕೆಂದು ಮಾತಂಡ ಎಂ. ಮೊಣ್ಣಪ್ಪ ಅವರು ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
1942 ರಿಂದಲೇ ಅಖಿಲ ಕೊಡವ ಸಮಾಜ ಕೊಡವರ ಹಾಗೂ ಕೊಡಗಿನ ಹಿತಕ್ಕೆ ಹಲವು ರೀತಿಯಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಜನಾಂಗದವರು ಭಿನ್ನಾಭಿಪ್ರಾಯ ಬದಿಗೊತ್ತಬೇಕು. ರಾಜಕೀಯ ಪ್ರತ್ಯೇಕವಾಗಿರಲಿ ಎಂದು ಅವರು ಹೇಳಿದರು. ಪೋಷಕರು ಮಕ್ಕಳು ಪ್ರವರ್ದಮಾನಕ್ಕೆ ಬರುವ ತನಕ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಂಡು ಶಿಸ್ತು ಬದ್ಧವಾಗಿ ಬೆಳೆಸಬೇಕು. ಮಕ್ಕಳಲ್ಲಿ ಆಚಾರ-ವಿಚಾರ, ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸಬೇಕೆಂದು ಅವರು ಸಲಹೆಯಿತ್ತರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಇಟ್ಟೀರ ಕೆ. ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿಗಳಾದ ನಂದೇಟಿರ ರಾಜ ಮಾದಪ್ಪ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಕಾನೂನು ಸಲಹೆಗಾರ ಬಲ್ಯಮಾಡ ಮಧು ಮಾದಪ್ಪ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಬಾಚರಣಿಯಂಡ ಅಪ್ಪಣ್ಣ, ಅ.ಕೊ.ಸ. ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ರಾಣು ಅಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.
ಶಂಕರಿ ಪೊನ್ನಪ್ಪ, ಸುಳ್ಳಿಮಾಡ ಗೋಪಾಲ್, ಬಲ್ಯಮೀದರಿರ ಸುಬ್ರಮಣಿ, ಮಲಚೀರ ಬೋಸ್, ನಾಪಂಡ ರವಿಕಾಳಪ್ಪ, ಕಟ್ಟೇರ ಕಾರ್ಯಪ್ಪ, ತೇಲಪಂಡ ಪ್ರಮೋದ್ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಾಳೆಲೆ, ಟಿ. ಶೆಟ್ಟಿಗೇರಿ, ಪೊನ್ನಂಪೇಟೆ, ಮರೆನಾಡ್, ಅಮ್ಮತ್ತಿ, ವೀರಾಜಪೇಟೆ, ನಾಪೋಕ್ಲು, ಕಾನೂರು, ಹುದಿಕೇರಿ, ಮಕ್ಕಂದೂರು ಮತ್ತಿತರ ಕೊಡವ ಸಮಾಜದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಡೆಮಂಡ ಸಬಿತಾ ಪ್ರಾರ್ಥಿಸಿ, ಇಟ್ಟೀರ ಬಿದ್ದಪ್ಪ ಸ್ವಾಗತಿಸಿದರು. ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ವಂದಿಸಿದರು.