ಸುಂಟಿಕೊಪ್ಪ, ಮೇ 25: ಬ್ಲೂ ಬಾಯ್ಸ್ ಯೂತ್ ಕ್ಲಬ್ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವÀ ಮತ್ತು ದಿ.ಡಿ. ಶಿವಪ್ಪ ಅವರ ಜ್ಞಾಪಕಾರ್ಥದ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್ಬಾಲ್ ಟೂರ್ನಿಯ ಇಂದಿನ ಪಂದ್ಯಾವಳಿಯಲ್ಲಿ ಈಗಲ್ ಎಫ್.ಸಿ. ಬೆಂಗಳೂರು ಹಾಗೂ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ತಂಡಗಳು ಜಯಗಳಿಸುವದರೊಂದಿಗೆ ಕ್ವಾರ್ಟರ್ ಫೈನಲಿಗೆ ಪ್ರವೇಶ ಪಡೆಯಿತು.
ಜಿ.ಯಂ.ಪಿ.ಶಾಲಾ ಮೈದಾನದಲ್ಲಿ ನಡೆದ ಮೊದಲನೆ ಪಂದ್ಯಾವಳಿಯು ಇಕೆಎನ್ ಸ್ಫೊಟಿಂಗ್ ಎಫ್.ಸಿ. ಇರಿಟ್ಟಿ ಮತ್ತು ಈಗಲ್ ಎಫ್.ಸಿ. ಬೆಂಗಳೂರು ನಡುವೆ ಬಿರುಸಿನಿಂದ ಕೂಡಿತ್ತು.
2 ತಂಡಗಳು ಪ್ರಥಮಾರ್ಧದಲ್ಲಿ ಬಿರುಸಿನ ರೋಮಾಂಚನಕಾರಿ ಪಂದ್ಯಾವಳಿಯನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ಕ್ರೀಡಾ ಪ್ರೇಕ್ಷಕರಿಗೆ ಕ್ರೀಡೆಯ ಸವಿಯನ್ನು ನೀಡಿದರಲ್ಲದೆ, ಪ್ರೇಕ್ಷಕರು 2 ತಂಡದ ಕ್ರೀಡಾಪಟುಗಳಿಗೆ ಕೇಕೆ ಶಿಳ್ಳೆಯ ಮೂಲಕ ಹುರಿದುಂಬಿಸುತ್ತಿದ್ದರು. 2 ತಂಡದ ಕ್ರೀಡಾಪಟುಗಳಿಗೆ ಹಲವು ಅವಕಾಶಗಳು ದೊರೆತರೂ ಪ್ರಥಮಾರ್ಧದಲ್ಲಿ ಗೋಲುಗಳಿಸಲು ವಿಫಲಗೊಂಡಿತು. ದ್ವಿತೀಯಾರ್ಧದಲ್ಲಿ ಈಗಲ್ ಎಫ್.ಸಿ. ಬೆಂಗಳೂರಿನ ಮುನ್ನಡೆ ಆಟಗಾರ ಶ್ರೀ 10ನೇ ನಿಮಿಷದಲ್ಲಿ ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಇದರಿಂದ 1-0 ಅಂತರದಿಂದ ಗೆಲುವು ಸಾಧಿಸಿತು.
ದ್ವಿತೀಯ ಪಂದ್ಯ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ಮತ್ತು ಮೈಸೂರು ಬ್ಲೂಸ್ ತಂಡಗಳ ನಡುವೆ ನಡೆಯಿತು. ಪ್ರಥಮಾರ್ಧದಲ್ಲಿ 2 ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಕೋಸ್ಮಸ್ ತಂಡಕ್ಕೆ ಮೈಸೂರು ಬ್ಲೂಸ್ ತಂಡ ಎಸಗಿದ ತಪ್ಪಿನಿಂದ ಫೌಲ್ ಕಿಕ್ ದೊರೆತರೂ ಗೋಲು ಅವಕಾಶವನ್ನು ತಂಡದ ಕ್ಷೇತ್ರ ರಕ್ಷಣೆಯನ್ನು ಮಾಡುವ ಮೂಲಕ ಎದುರಾಳಿ ತಂಡದ ಅವಕಾಶವನ್ನು ಭಗ್ನಗೊಳಿಸಿದರು.
ದ್ವಿತೀಯಾರ್ಧದಲ್ಲಿ 2 ತಂಡಗಳು ಸಮಬಲದ ಪ್ರದರ್ಶನ ನೀಡುತ್ತಿರುವಂತೆಯೇ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ತಂಡದ ಮುನ್ನಡೆ ಆಟಗಾರ ನಾಸಿಫ್ 18ನೇ ನಿಮಿಷದಲ್ಲಿ ಮೈಸೂರು ಬ್ಲೂಸ್ ತಂಡದ ಕ್ಷೇತ್ರರಕ್ಷಕನನ್ನು ವಂಚಿಸಿ ಗೋಲುಗಳಿಸುವ ಮೂಲಕ ಮುನ್ನಡೆ ಒದಗಿಸಿದರು. 24ನೇ ನಿಮಿಷದಲ್ಲಿ ಕ್ಯಾಲಿಕೆಟ್ ತಂಡದ ಇನ್ನೋರ್ವ ಆಟಗಾರ ಮೂರಾಡ್ ಮತ್ತೊಂದು ಗೋಲು ಬಾರಿಸುವ 2-0 ಅಂತರವನ್ನು ನೀಡಿ, ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿತ್ತು. ಮೈಸೂರು ಬ್ಲೂಸ್ ತಂಡವು ಎದುರಾಳಿ ಆಟಗಾರ ಕ್ಷೇತ್ರರಕ್ಷಕನನ್ನು ವಂಚಿಸಿ 26ನೇ ನಿಮಿಷದಲ್ಲಿ 1 ಗೋಲು ಬಾರಿಸುವ ಮೂಲಕ ತಂಡದ ಅಂತರವನ್ನು ಕಡಿಮೆಗೊಳಿಸಿಕೊಂಡು 2-1 ಗೋಲುಗಳಿಂದ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ತಂಡವು ಕ್ವಾಟರ್ ಫೈನಲಿಗೆ ಪ್ರವೇಶ ಪಡೆಯಿತು.