ಕೂಡಿಗೆ, ಮೇ 25: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಈಗಾಗಲೇ ದಿಡ್ಡಳ್ಳಿಯಿಂದ ಆದಿವಾಸಿಗಳನ್ನು ಕರೆತಂದಿರುವ ಜಿಲ್ಲಾಡಳಿತ, ಆದಿವಾಸಿಗಳಿಗೆ ಮೊದಲನೆಯದಾಗಿ ಒಂದು ಮಾದರಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಒಂದು ಕುಟುಂಬಕ್ಕೆ ಅವಶ್ಯಕ ವಾಗುವಂತೆ 30x40ರ ಜಾಗದಲ್ಲಿ ಮಾದರಿ ಮನೆ ನಿರ್ಮಾಣವಾಗುತ್ತಿದ್ದು, ಅಂದಾಜು 3.50 ರಿಂದ 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ 187 ಕುಟುಂಬಗಳು ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಾಣ ಮಾಡಿ ಕೊಂಡು ತಮ್ಮ ಜೀವನ ಸಾಗಿಸುತ್ತಿ ದ್ದಾರೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲು ಟೆಂಡರ್ ಪ್ರಕ್ರಿಯೆಗಳು ನಡೆದಿದ್ದು, ನಿರ್ಮಾಣ ಚಾಲ್ತಿಯಲ್ಲಿದೆ.

ಮುಖ್ಯರಸ್ತೆಯಿಂದ ಮನೆಗಳಿಗೆ ತೆರಳಲು ಅಗಲವಾದ ರಸ್ತೆ ಕಾಮಗಾರಿಯು ನಡೆಯುತ್ತಿದೆ. ಇದರಲ್ಲಿ ರಸ್ತೆ ಇಕ್ಕೆಲಗಳ ಚರಂಡಿಯ ಕೆಲಸವು ನಡೆಯುತ್ತಿದ್ದು, ಮನೆಗಳ ನಿರ್ಮಾಣವಾದ ನಂತರ ಸುವ್ಯವಸ್ಥಿತ ವಾಗಿ ನೀರು ಹರಿಯಲು ವ್ಯವಸ್ಥೆ ಗಳನ್ನು ಮತ್ತು ಮನೆಗಳಿಗೆ ಸಾಗಲು ಉತ್ತಮವಾದ ಬೀದಿ ದೀಪದ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ.

ಮಾದರಿ ಮನೆ ನಿರ್ಮಾಣದ ನಂತರ ಜಿಲ್ಲಾಡಳಿತ ಅನುಮತಿ ದೊರೆತ ಮೇರೆಗೆ ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಇನ್ನುಳಿದ 186 ಮನೆಗಳ ನಿರ್ಮಾಣ ಮಾಡಲಿದ್ದಾರೆ. ಅದುವರೆಗೆ ಅವರವರು ನಿರ್ಮಿಸಿಕೊಂಡಿರುವ ಟಾರ್ಪಲ್ ಶೆಡ್ಡ್‍ಗಳ ಬದಲು ಇಲಾಖೆಯವರು ಕಬ್ಬಿಣದ ರಾಡ್‍ಗಳ ಮೂಲಕ ಶೆಡ್‍ಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಹಾರ ಪೂರೈಕೆಯ ವ್ಯವಸ್ಥೆಯು ನಡೆಯುತ್ತಿದ್ದು, ಅಲ್ಲಿನ ಆದಿವಾಸಿಗಳು ಆಹಾರವನ್ನು ಪಡೆಯುತ್ತಿದ್ದಾರೆ. ಇದೇ ಮಾದರಿಯಲ್ಲಿ ದಿಡ್ಡಳ್ಳಿಯಿಂದ ಬಸವನಹಳ್ಳಿಗೆ ಬಂದ 120 ಕುಟುಂಬಗಳಿಗೆ ಈ ಹಂತದಲ್ಲೇ ಮನೆಗಳ ನಿರ್ಮಿಸುವಿಕೆ ಹಾಗೂ ಅವರಿಗೆ ಬೇಕಾಗುವ ರೀತಿಯ ಅನುಕೂಲತೆಗಳನ್ನು ಮಾಡುವದರಲ್ಲಿ ಜಿಲ್ಲಾಡಳಿತ ಸನ್ನದ್ಧರಾಗಿದೆ. ಬ್ಯಾಡಗೊಟ್ಟದಲ್ಲಿ ಇಲಾಖೆಯ ವತಿಯಿಂದ ಈಗಾಗಲೇ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಗಳು ನಿರ್ಮಾಣಗೊಂಡ ನಂತರ ಹೊಸ ಬಡಾವಣೆಯಂತೆ ಎಲ್ಲಾ ಸೌಲಭ್ಯಗಳು ದೊರೆತಂತಾಗುತ್ತದೆ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಯವರು ನಿರ್ಮಾಣ ಕಾರ್ಯ ಮಾಡುತ್ತಿರುವದು ಸಮರ್ಪಕ ಹಾಗೂ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

-ಕೆ.ಕೆ.ನಾಗರಾಜಶೆಟ್ಟಿ.