ವೀರಾಜಪೇಟೆ, ಮೇ 25: ಕಾಕೋಟುಪರಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇತ್ರಿ ಹೆಮ್ಮಾಡುವಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಕಳೆದ 10 ವರ್ಷಗಳ ಹಿಂದೆ ಹೆಮ್ಮಾಡು ಗ್ರಾಮದಲ್ಲಿ ಕಿರು ನೀರಾವರಿ ಯೋಜನೆ ಅಡಿಯಲ್ಲಿ ಬೋರ್‍ವೆಲ್ ಮೂಲಕ ಸುತ್ತಮುತ್ತಲ 200ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಈ ಬಾರಿ ಅತಿ ಹೆಚ್ಚಿನ ಬರಗಾಲವನ್ನು ಎದುರಿಸುತ್ತಿರುವದರಿಂದ ರಾಜ್ಯ ಸರ್ಕಾರ ಕುಡಿಯವ ನೀರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಆದೇಶ ನೀಡಿದರೂ ಅಧಿಕಾರಿಗಳು ತಮಗೇನು ಅರಿಯದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಅಳಲು.

ಕಳೆದ ಮಾರ್ಚ್ ತಿಂಗಳಲ್ಲಿ ಬೋರ್‍ವೆಲ್‍ನಲ್ಲಿ ಹೂಳು ತುಂಬಿಕೊಂಡ ಹಿನ್ನಲೆಯಲ್ಲಿ ಮೋಟಾರ್ ಕೆಟ್ಟು ಹೋದ ಕಾರಣ ನೇರವಾಗಿ ಕಾವೇರಿ ನದಿಗೆ 10 ಹೆಚ್.ಪಿ ಮೋಟಾರನ್ನು ಅಳವಡಿಸಿ ಒಂದು ವಾರದ ಮಟ್ಟಿಗೆ ತಾತ್ಕಾಲಿಕ ವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವೈಜ್ಞಾನಿಕವಾಗಿ ಕುಡಿಯುವ ನೀರನ್ನು ಶುದ್ದಿಕರಿಸದೆ ನೇರವಾಗಿ ಉಪಯೋಗಿಸುವಂತಿಲ್ಲ. ಈ ವಿಚಾರ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಈವರೆಗೂ ಬೋರ್‍ಲ್ಲ್‍ನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಕಾಕೋಟು ಪರಂಬು ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ಯಲ್ಲಿ ಯಾವದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪಿಡಿಓ ಅವರು ವೀರಾಜಪೇಟೆ ಕಾರ್ಯ ನಿರ್ವಹಣಾಧಿಕಾರಿಗಳ ಅಣತಿಯಂತೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೂಡಲೇ ಅವರನ್ನು ವರ್ಗ ಮಾಡಿ ಖಾಯಂ ಪಿಡಿಓ ಒದಗಿಸುವಂತೆ ಆಗ್ರಹಿಸಿದ್ದಾರೆ.

ಈ ವಿಚಾರದಲ್ಲಿ ತಾಲೂಕು ಕಾರ್ಯನಿರ್ವಣಾಧಿಕಾರಿ ಪಡ್ನೇಕರ್ ಅವರನ್ನು ಸಂಪರ್ಕಿಸಿದಾಗ ನನಗೆ ಈವರೆಗೆ ಯಾರು ದೂರು ನೀಡಿಲ್ಲ. ಬೋರ್‍ವೆಲ್‍ನಲ್ಲಿ ಹೂಳು ತುಂಬಿಕೊಂಡ ಕಾರಣ ಕೆಸರು ನೀರು ಬರುತ್ತಿದೆ. ನದಿಯ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಕೇವಲ ಗಿಡಗಳಿಗೆ ಉಪಯೋಗಿಸಲು ಮಾತ್ರ ತಿಳಿಸಲಾಗಿದೆ. ಒಂದೆರಡು ದಿನಗಳಲ್ಲಿ ಮತ್ತೊಂದು ಬೋರ್‍ವೆಲ್ ತೆಗೆದು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದಾಗಿ ಗ್ರಾ.ಪಂ. ಸದಸ್ಯ ಮಂಡೇಟಿರ ಅನಿಲ್ ಅಯ್ಯಪ್ಪ ಹಾಗೂ ಗ್ರಾಮದ ಪಿ.ಟಿ. ರಮೇಶ್ ದೂರಿದ್ದಾರೆ.