ಸಿದ್ದಾಪುರ, ಮೇ 25: ಕೊಡಗು ಜಿಲ್ಲೆಯ ಕಾವೇರಿ ಹೊಳೆ ವ್ಯಾಪ್ತಿಯ ಸುಮಾರು 35 ಕಿ.ಮೀ. ಪ್ರದೇಶವನ್ನು ಕರ್ನಾಟಕ ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಜಂಟಿಯಾಗಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.ನೆಲ್ಲಿಹುದಿಕೇರಿಯಲ್ಲಿ ಕಾವೇರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಪ್ರದೇಶದಿಂದ ಶಿರಂಗಾಲ ತನಕ 35 ಕಿ.ಮೀ. ದೂರದಷ್ಟು ನದಿ ವಲಯವನ್ನು ಸಂಬಂಧಿಸಿದ ಉಭಯ ಇಲಾಖೆಗಳು ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿಗೆ ಗುತ್ತಿಗೆಗೆ ನೀಡಿರುವದಾಗಿ ಗೊತ್ತಾಗಿದೆ.

ಈ ಬಗ್ಗೆ ಅರಣ್ಯಾಧಿಕಾರಿಗಳಲ್ಲಿ ಸಮರ್ಪಕ ಮಾಹಿತಿ ಇಲ್ಲ, ಬದಲಾಗಿ ಕರ್ನಾಟಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಸಂಬಂಧಿಸಿದ ಸಂಸ್ಥೆಯವರು ಅನುಮತಿ ಪಡೆದುಕೊಂಡು ಹಲವು ವರ್ಷಗಳು ಆಗಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ನದಿಪಾತ್ರ ಅತ್ಯಂತ ಸೂಕ್ಷ್ಮವಲಯದೊಂದಿಗೆ ಸಂರಕ್ಷಿತ ಪ್ರದೇಶವಾಗಿರುವಾಗ, 35 ಕಿ.ಮೀ. ದೂರ ಬಿಟ್ಟುಕೊಟ್ಟಿರುವದಾದರೂ ಹೇಗೆ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಬದಲಾಗಿ ಮಂಗಳವಾರ ನದಿ ಪಾತ್ರದಲ್ಲಿ ಅಪರೂಪದ ಮಹಶೀರ್ ಮೀನುಗಳ ಪರಿಶೀಲನೆ ವೇಳೆ ಈ ಸಂಗತಿ ಸ್ಪಷ್ಟಗೊಂಡಿದೆ.

ಸಿದ್ದಾಪುರ ವರದಿ

ಕಾವೇರಿ ನದಿ ಹರಿವು ಪ್ರದೇಶದಲ್ಲಿ ಮಾತ್ರ ಕಂಡು ಬರುವ ಕೆಂಪು ಗರಿ ಹೊಂದಿರುವ ಅಪರೂಪದ ಮಹಶೀರ್ ಮೀನು ಸಂರಕ್ಷಣೆಗೆ ಮುಂದಾಗಿರುವ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಮಂಗಳವಾರದಂದು ಚಾಲನೆ ನೀಡಿತು.

ನೆಲ್ಯಹುದಿಕೇರಿಯ ಕಾವೇರಿ ನದಿ ಸೇತುವೆಯಿಂದ ಸೊಮವಾರಪೇಟೆಯ ಶಿರಂಗಾಲದವರೆಗೆ ಮಹಿಶೀರ್ ಮೀನುಗಳ ಸಂರಕ್ಷಣಾ ವಲಯ ಎಂದು ಗುರುತಿಸಿರುವ ಅರಣ್ಯ ಮತ್ತು ಮೀನುಗಾರಿಕೆ ಇಲಾಖೆ ಸುಮಾರು 35 ಕಿಲೋಮೀಟರ್ ವ್ಯಾಪ್ತಿಯ ನದಿ ಹರಿಯುವ ಮಾರ್ಗವನ್ನು ಕೂರ್ಗ್ ವೈಲ್ಡ್ ಲೈಫ್ ಸಂಸ್ಥೆಗೆ ಗುತ್ತಿಗೆ ನೀಡಿದೆ ಎಂದು ತಿಳಿದುಬಂತು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಚಾರುಲತಾ ಸೋಮಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಮೀನುಗಾರಿಕೆ ಇಲಾಖೆ ಅಧಿಕಾರಿ ದರ್ಶನ್, ಕೂರ್ಗ್ ವೈಲ್ಡ್ ಲೈಫ್‍ನ ಚೇಂದಂಡ ಅಯ್ಯಪ್ಪ, ಬಪಿನ್ ಬೋಪಣ್ಣ, ಶ್ಯಾಮ್ ಐಯ್ಯಪ್ಪ, ತರುಣ್ ಕಾರ್ಯಪ್ಪ ಉಪಸ್ಥಿತರಿದ್ದರು.

-ಅಂಚೆಮನೆ ಸುಧಿ