ಮಡಿಕೇರಿ, ಮೇ 25: ಪ್ರತಿ ಗ್ರಾಮದ ಹಳ್ಳಿ ರಸ್ತೆಗಳು ಅಭಿವೃದ್ಧಿ ಹೊಂದುವದರಿಂದ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು.ಇಲ್ಲಿಗೆ ಸಮೀಪದ ಬೇಗೂರು ಮತ್ತು ಮದೆನಾಡು ಗ್ರಾಮ ಪಂಚಾಯ್ತಿ ಅವಂದೂರು ಕೊಳಗದಾಳು ಗ್ರಾಮವನ್ನು ಬೆಸೆಯುವ ರಸ್ತೆ ಅಭಿವೃದ್ಧಿಗೆ ನಬಾರ್ಡ್ ವತಿಯಿಂದ ಬಿಡುಗಡೆಯಾದ 50 ಲಕ್ಷ ರೂ.ನಲ್ಲಿ ನಿರ್ಮಿಸಿದ್ದ ರಸ್ತೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರು ಸಹಕರಿಸುವದರಿಂದ ಉತ್ತಮ ರಸ್ತೆ ನಿರ್ಮಾಣ ಸಾಧ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಗೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಅಶೋಕ್ ವಹಿಸಿದ್ದರು. ಈ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯರಾದ ಯಾಲದಾಳು ಪದ್ಮಾವತಿ , ಆರ್.ಎಂ.ಸಿ. ಸದಸ್ಯ ಬೆಪ್ಪುರನ ಮೇದಪ್ಪ, ಬೆಟ್ಟಗೇರಿ ಉದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಳೂರ್ ಕಿಶೋರ್ ಕುಮಾರ್, ಮದೆ ಗ್ರಾ.ಪಂ. ಉಪಾಧ್ಯಕ್ಷೆ ಬಿ.ಎಸ್.ರತ್ನಾ , ಬಿ.ಜೆ.ಪಿ. ಕಾರ್ಯಸಮಿತಿ ಅಧ್ಯಕ್ಷ ಕಡ್ಯದ ವಿಜಯ ಕುಮಾರ್, ಹಾಗೂ ಬೇಗೂರು ಮತ್ತು ಮದೆನಾಡು ಗ್ರಾ.ಪಂ. ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮದೆನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಕಡ್ಯದ ಸೋಮಣ್ಣ ಪ್ರಾಸ್ತಾವಿಕ ನುಡಿಯಾಡಿ, ಸದಸ್ಯ ರವಿ ಸ್ವಾಗತಿಸಿ ವಂದಿಸಿದರು.