*ಗೋಣಿಕೊಪ್ಪಲು, ಮೇ 25: ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ, ಬುಡಕಟ್ಟು ಜನರ ನೃತ್ಯ, ಬಗೆ ಬಗೆಯ ವೇಷಧಾರಿಗಳ ಅಶ್ಲೀಲ ಬೈಗುಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷಧಾರಿಗಳು ಸೊರೆಕಾಯಿ ಬುರುಡೆಯ ಜಿಲಿ-ಜಿಲಿ ಬೋರ್ಗರೆತ ನಾದದೊಂದಿಗೆ ನೆರೆದ ಭಕ್ತಾದಿಗಳಿಗೆ ವಾಚಮ ಗೋಚರವಾಗಿ ಬಯ್ಯುತ್ತಾ, ಕುಣಿಯುತ್ತಾ ಮನರಂಜನೆ ನೀಡಿದರು.ಸೊಪ್ಪು, ಹರಿದ ಬಟ್ಟೆ, ಕರಡಿ ವೇಷ, ಸ್ತ್ರೀ ರೂಪಧಾರಿಗಳು ಉದ್ದಕೂದಲು, (ಮೊದಲ ಪುಟದಿಂದ) ತುಂಡುಡುಗೆ, ಫ್ಯಾಶನ್ ವೇಷಧಾರಿಗಳು ಇಂತಹ ಅನೇಕ ಮುಖವಾಡ ಹಾಕಿಕೊಂಡು ಗಂಡಸರು ಸ್ತ್ರೀಯರ ಉಡುಪುಗಳನ್ನು ಧರಿಸಿ ಹುಡುಗಿಯರಂತೆ ಕಾಣಿಸಿಕೊಂಡರು. ಡೋಲು ಬಡಿತಕ್ಕೆ ಸರಿಯಾಗಿ ತಾಳ ಹಾಕಿ ಕುಣಿಯುವ ಪರಿ ಎಂತಹವರ ಮನಸ್ಸನ್ನು ಮುದಗೊಳಿಸುವಂತಿತ್ತು.
ದಿನಂಪ್ರತಿ ದುಡಿಯುವ ದೇಹಗಳು ಇಂದು ಭಕ್ತಾದಿಗಳಿಗೆ ಮನರಂಜನೆ ನೀಡಿ ತಾವುಗಳು ಸಂಭ್ರಮಿಸಿದರು.
ಆದಿವಾಸಿಗಳ ವಿಭಿನ್ನ ವೇಷಧಾರಿಯ ಬೇಡುಹಬ್ಬದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವೇಷಧಾರಿಗಳು ಪಾಲ್ಗೊಂಡು ಸಂಭ್ರಮಕ್ಕೆ ಕಾರಣರಾದರು.
ನಾನಾ ವೇಷಧಾರಿಗಳು ಬೇಡುವಾಗ ಕೆಲವೊಂದು ಅಶ್ಲಿಲ ಪದಗಳನ್ನು ಬಳಸಿ ಬೇಡುತ್ತಾರೆ. ಪದಗಳನ್ನು ಕೇಳಿ ನಾಚಿಗೆ ಪಟ್ಟವರು ಇವರಿಗೆ ಬೇಗ ಹಣ ನೀಡಿ ಕಳುಹಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಅಸ್ತ್ರವಾಗಿ ಬಳಸುವ ವೇಷಧಾರಿಗಳು ಹೆಚ್ಚಾಗಿ ಹಣ ಸಂಪಾದಿಸುತ್ತಾರೆ
ಆದಿವಾಸಿಗಳು ಇಂದು ಕೂಡ ತನ್ನ ವೇಷಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ತೊಡಿಸಿಕೊಂಡು ಸಂಭ್ರಮಿಸುತ್ತಾರೆ. ಇಂದು ತಾಂತ್ರಿಕವಾಗಿ ಮುಂದುವರೆದಿರುವ ಇವರು ಕಾಲಕ್ಕೆ ತಕ್ಕಂತೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯಮಟ್ಟದ ವ್ಯಕ್ತಿಗಳಂತೆ ವೇಷಭೂಷಣ ಮಾಡಿಕೊಂಡು ಜನರಿಂದ ಬೇಗ ಆಕರ್ಷಿತರಾದರು.
ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ 2.30 ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ 4 ಸಾವಿರಕ್ಕೂ ಅಧಿಕ ಭಕ್ತಾದಿಗಳು ದೂರ-ದೂರದ ಊರಿನಿಂದ ಬಂದು ಸೇರಿದ್ದರು.
ಇದಕ್ಕೂ ಮೊದಲು ಅಲ್ಲಿನ ಅಂಬಲದಿಂದ ಭದ್ರಕಾಳಿ ದೇವರು ವ್ಯಕ್ತಿ ಮೂಲಕ ದರ್ಶನ ನೀಡಿ ಹಬ್ಬದಲ್ಲಿ ಪಾಲ್ಗೊಂಡಿತು. ಪಣಿಕ ಜನಾಂಗದ ಇಬ್ಬರು ವ್ಯಕ್ತಿಗಳು ದೇವರ ಮೊಗವನ್ನು ತೆಗದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳುತ್ತಾರೆ. ಇದರೊಂದಿಗೆ ಇಬ್ಬರು ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕ ಮುಖ್ಯಸ್ಥರು ತೆರಳುತ್ತಾರೆ.
ದೇವರ ವಿಧಿವಿಧಾನದೊಂದಿಗೆ ನಡೆಯುವ ಈ ಹಬ್ಬದಲ್ಲಿ ಸಣ್ಣುವಂಡ ಕುಟುಂಬದ ತಕ್ಕ ರಜನ್ ತಿಮ್ಮಯ್ಯ ಭಂಡಾರ ಪೆಟ್ಟಿಗೆಯನ್ನು ಹೊತ್ತಿದ್ದರು. ಇದರೊಂದಿಗೆ ಬಿದಿರಿನಿಂದ ತಯಾರಿಸಿದ ಕೃತಕ ಕುದುರೆಯನ್ನು ಚಕ್ಕೇರ ದೇವುಬೆಳ್ಯಪ್ಪ, ಕಳ್ಳಿಚಂಡ ಮುತ್ತಣ್ಣ ಹೊತ್ತು ದೇವಸ್ಥಾನದ ಕಣದಲ್ಲಿ ವೇಷಧಾರಿಗಳೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದರು.
ವನವಾಸಿ ಕಲ್ಯಾಣ ಸಂಘದ ವತಿಯಿಂದ ಭಕ್ತಾದಿಗಳಿಗೆ ಹಾಗೂ ವೇಷಧಾರಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ಒಪ್ಪಿಸಿದರು.
ಬೇಡು ಹಬ್ಬದ ಸಂಭ್ರಮ....
ಗುಡ್ಡೆಹೊಸೂರು : ಬೈಗುಳದ ಬೇಡು ಹಬ್ಬ ಎಂಬದಾಗಿ ಖ್ಯಾತಿ ಪಡೆದ ಈ ಹಬ್ಬದ ಅಂಗವಾಗಿ ಇಂದು ಜಿಲ್ಲೆಯ ಇತರೆಡೆಗಳಿಂದಲೂ ಜನರು ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಗುಡ್ಡೆಹೊಸೂರು, ಕುಶಾಲನಗರ ಸುತ್ತಮುತ್ತ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ತಂಡಗಳು ವಿವಿಧ ವೇಷ ಧರಿಸಿ ಕುಣಿಯುತ್ತಿದ್ದ ದೃಶ್ಯ ಸಾರ್ವಜನಿಕರನ್ನು ರಂಜಿಸಿತು. ಈ ತಂಡಗಳು ದೇವರಪುರದಲ್ಲಿ ನಡೆಯುವ ಉತ್ಸವದಲ್ಲಿ ಭಕ್ತಿ ಭಾವದಿಂದ ದೇವರನ್ನು ಆರಾಜಿಸಿತು.