ಮಡಿಕೇರಿ, ಮೇ 25: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎ. ಷಂಶುದ್ದೀನ್ ಅವರು ನೇಮಕಗೊಂಡಿದ್ದಾರೆ. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಷಂಶುದ್ದೀನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಷಂಶುದ್ದೀನ್ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಹಲವಾರು ಕೃತಿಗಳನ್ನು, ನಾಟಕಗಳನ್ನು ರಚಿಸಿದ್ದಾರೆ. ಬಹುಭಾಷಾ ಸಾಹಿತಿಯಾಗಿರುವ ಷಂಶುದ್ದೀನ್ ಅವರು 8ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ನಡೆದ 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಶ್ರೀಧರ್ ಹೆಗಡೆ ಪಾಲ್ಗೊಂಡಿದ್ದರು.