ನಾಪೋಕ್ಲು, ಮೇ 25: ಸೇನೆಗೆ ಸೇರಲಿಚ್ಚಿಸುವ ಯುವಕರಿಗೆ ನಾಪೋಕ್ಲು ಕೊಡವ ಸಮಾಜದಲ್ಲಿ ಉಚಿತ ತರಬೇತಿಯನ್ನು ನೀಡುತ್ತಿದ್ದು, ಮಾಜೀ ಸೈನಿಕರ ಸಂಘ ಹಾಗೂ ಕೊಡವ ಸಮಾಜ ಕ್ರೀಡಾ ಮತ್ತು ಸಾಂಸ್ಕøತಿಕ ಕ್ಲಬ್ ವತಿಯಿಂದ ಉಚಿತವಾಗಿ ವಸತಿ ಉಟೋಪಚಾರ ಗಳೊಂದಿಗೆ ತರಬೇತಿ ಶಿಬಿರ ಆಯೋಜನೆಗೊಂಡಿದೆ. ತಾ.26 ರವರೆಗೆ ಶಿಬಿರ ನಡೆಯಲಿದೆ. ತರಬೇತಿಗೆ ಜಿಲ್ಲೆಯ ಶ್ರೀಮಂಗಲ, ಮೂರ್ನಾಡು, ಭಾಗಮಂಡಲ. ಬೆಟ್ಟಗೇರಿ, ಮಾತ್ರವಲ್ಲದೆ ನಾಲ್ಕು ನಾಡು ಸುತ್ತಮುತ್ತಲಿನ 62 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವದು ವಿಶೇಷ. ಈ ತರಬೇತಿ ಅವಧಿಯಲ್ಲಿ ದೈಹಿಕ, ತಾಂತ್ರಿಕ ತರಬೇತಿ ಸೇರಿದಂತೆ ಪರೀಕ್ಷಾಪೂರ್ವ ತರಬೇತಿಯನ್ನು ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 9.30 ರವರೆಗೆ ನೀಡಲಾಗುತ್ತಿದೆ. ಬಳಿಕ 12 ಗಂಟೆವರೆಗೆ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ತರಬೇತಿಯನ್ನು ನಡೆಸಲಾಗುತ್ತಿದೆ. ದೈಹಿಕ ತರಬೇತಿಯನ್ನು ನಿವೃತ್ತ ಸೇನಾಧಿಕಾರಿ ಹಾಗೂ ಸೈನಿಕರು ನೀಡುತ್ತಿದ್ದು, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಕೇಟೋಳಿರ ಡಾಲಿ ಅಪ್ಪಚ್ಚ, ಅರೆಯಡ ನಕುಲ್ ಪೊನ್ನಪ್ಪ, ಕಂಗಂಡ ಮಿಟ್ಟು, ಮಾರ್ಚಂಡ ಗಣೇಶ್, ಶಿಕ್ಷಕ ಸಿ.ಎಸ್. ಸುರೇಶ್, ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡುತ್ತಿದ್ದಾರೆ. ತರಬೇತಿ ಮಾಗದರ್ಶಕರಾಗಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು, ಖಜಾಂಚಿ ಕರೀಂ ಹಾಗೂ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಕಲ್ಯಾಟಂಡ ರಮೇಶ್, ಉಪಸ್ಥಿತರಿದ್ದು, ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ 27 ಕೂರ್ಗ್ ರೆಜಿಮೆಂಟ್‍ನ ತರಬೇತುದಾರರಾದ ಚೋಕಿರ ಮಹೇಶ್ (ಮಧು) ಮತ್ತು, ಕುದುಪಜೆ ಸನತ್ ಕುಮಾರ್ ತರಬೇತಿ ನೀಡುತ್ತಿದ್ದಾರೆ. ಸಮಾರೋಪ ಸಮಾರಂಭ ತಾ. 27 ರಂದು ಬೆಳಿಗ್ಗೆ 9.30ಕ್ಕೆ ಕೊಡವ ಸಮಾಜದಲ್ಲಿ ಜರುಗಲಿದೆ. ತರಬೇತಿಯ ಪ್ರಮುಖ ಪಾತ್ರ ವಹಿಸಿರುವ ಕೊಂಡಿರ ಗಣೇಶ್ ನಾಣಯ್ಯ ಮಾಹಿತಿ ನೀಡಿದ್ದಾರೆ.

-ದುಗ್ಗಳ