ಮಡಿಕೇರಿ, ಮೇ 25: ಕಳೆದ ನಾಲ್ಕು ದಶಕಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ವಹಿವಾಟು ನಡೆಸುತ್ತಿರುವ ‘ಜನತಾ ಬಜಾರ್’ ಸಹಕಾರ ಸಂಸ್ಥೆ ಇದೀಗ ಸ್ವಂತ ನೆಲೆ ಕಂಡುಕೊಂಡಿದೆ.

1975ರಲ್ಲಿ ಪ್ರಾರಂಭಗೊಂಡಿರುವ ಈ ಸಹಕಾರ ಗ್ರಾಹಕರ ಸ್ಟೋರ್‍ನಲ್ಲಿ ಇಂದು ವಾರ್ಷಿಕ ರೂ. 2.50 ಕೋಟಿಯಷ್ಟು ವಹಿವಾಟು ನಡೆಯುತ್ತಿದೆ. ಪ್ರಾರಂಭದಲ್ಲಿ ಈ ಸಂಸ್ಥೆಯ ಅಧ್ಯಕ್ಷರಾಗಿ ಎಂ.ಯು. ಕಾಳಪ್ಪ, ಬಳಿಕ ಸಿ.ವಿ. ಸದಾಶಿವರಾವ್ ಎರಡೆರಡು ಅವಧಿಗೆ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದರು. ಅನಂತರದಲ್ಲಿ ಎಂ.ಬಿ. ದೇವಯ್ಯ ಎರಡು ಅವಧಿ ಹಾಗೂ ಕೆದಂಬಾಡಿ ಪ್ರಕಾಶ್ ಸುಧೀರ್ಘ 3 ಅವಧಿಗೆ ಕಾರ್ಯನಿರ್ವಹಣೆಯೊಂದಿಗೆ ಪ್ರಸಕ್ತ ಎನ್.ಎ. ರವಿಬಸಪ್ಪ 2010 ರಿಂದ ಅಧ್ಯಕ್ಷರಾಗಿದ್ದಾರೆ. ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರ ಬೆಂಬಲದಿಂದ ಇದೀಗ ಸ್ವಂತ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ರವಿಬಸಪ್ಪ ತಿಳಿಸಿದ್ದಾರೆ. ಇದುವರೆಗೆ ಬಾಡಿಗೆಗೆ ಹೊಂದಿದ್ದ ಈ ಕಟ್ಟಡವನ್ನು ಇದೀಗ ಶುದ್ಧ ಕ್ರಯಕ್ಕೆ ಖರೀದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.