ಸೋಮವಾರಪೇಟೆ, ಮೇ 25: ಇಲ್ಲಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಆಗ್ರಹಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ವಾಟರ್‍ಮೆನ್ ಕೆ.ಕೆ. ಕುಮಾರ್ ಗುರುವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ, ಹಾನಗಲ್ಲು ಗ್ರಾಮದ ಸುಧಾ ಎಂಬ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಹಲ್ಲೆಯಿಂದ ನೌಕರನ ತೋಳಿನ ಭಾಗಕ್ಕೆ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಒಂದು ವಾರದ ಒಳಗೆ ಆರೋಪಿಯನ್ನು ಪೊಲೀಸರು ಬಂಧಿಸಬೇಕು. ತಪ್ಪಿದಲ್ಲಿ ಸಂಘದ ವತಿಯಿಂದ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಎಸ್. ಮಂಜಪ್ಪ, ಕೆ.ಪಿ. ಗಂಧರ್ವ, ಕೆ.ಕೆ. ಕುಮಾರ್ ಅವರುಗಳು ಉಪಸ್ಥಿತರಿದ್ದರು.